
ಬೀದರ್: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜಮೀನುಗಳು ಜಲಾವೃತಗೊಂಡು ಲಕ್ಷಾಂತರ ಮೌಲ್ಯದ ಬೆಳೆ ನಾಶವಾಗಿರುವ ಘಟನೆ ಕಮಲನಗರ ತಾಲೂಕಿನ ಬಾಲೂರು ಗ್ರಾಮದಲ್ಲಿ ನಡೆದಿದೆ.

j3tvkannada
ಬಾಲಾಜಿ ಪಾಟೀಲ್, ನೇತಾಜಿ ನಾಗೂರಾವ್ ಸೇರಿದಂತೆ ಹಲವು ರೈತರ ಲಕ್ಷಾಂತರ ರೂ. ಮೌಲ್ಯದ ವಿವಿಧ ಬೆಳೆಗಳು ನಾಶವಾಗಿವೆ. ಶೇಂಗಾ, ಬೆಂಡೆಕಾಯಿ, ಬದನೆಕಾಯ, ಕಬ್ಬು ಸೇರಿದಂತೆ ಹಲವು ಬೆಳೆಗಳು ನಾಶವಾಗಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ಬೆಳೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. 2 ರಿಂದ 3 ಅಡಿ ನೀರು ನಿಂತಿದ್ದು, ಶೇಂಗಾ ಬಹುತೇಕ ಕೊಳೆತು ಹೋಗಿದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಪರಿಹಾರ ನೀಡಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.
ಅದೇ ಪಟ್ಟಣದ ಇಂದ್ರಾನಗರ ಕಾಲೋನಿಯ ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಪರಿಣಾಮ ಮನೆಯಲ್ಲಿದ್ದ ಅಕ್ಕಿ, ಈರುಳ್ಳಿ ಸೇರಿದಂತೆ ಧವಸ ದಾನ್ಯಗಳು ನೀರು ಪಾಲಾಗಿದ್ದು, ಜನರು ಪರದಾಡುತ್ತಿದ್ದಾರೆ. ಮನೆಯ ಮುಂದೆ ನೀರು ನಿಂತು ಕೆರೆ ಸೃಷ್ಟಿಯಾಗಿದ್ದು, ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಚರಂಡಿ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ಒಂದೇ ಮಳೆಗೆ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಗೃಹ ಬಳಕೆ ವಸ್ತುಗಳು ಕೂಡ ಹಾಳಾಗಿದ್ದು, ಜನರು ಅಧಿಕಾರಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ.