
ರಾಯಚೂರು: ತಮ್ಮ ಮುಂದಿನ ಸಿನಿಮಾ ಯಶಸ್ಸಿಗಾಗಿ ನಟ ವಿನೋದ್ ಪ್ರಭಾಕರ್ ಮಂತ್ರಾಲಯಕ್ಕೆ ಭೇಟಿ ನೀಡಿ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಉರುಳು ಸೇವೆ ಮಾಡಿ ಹರಕೆ ತೀರಿಸಿದ್ದಾರೆ.

j3tvkannada
ಮಾದೇವ ಸಿನಿಮಾ ಯಶಸ್ಸಿಗಾಗಿ ಸಿನಿಮಾ ತಂಡದೊಂದಿಗೆ ವಿನೋದ್ ಪ್ರಭಾಕರ್ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಅದೇ ರೀತಿ ಮಂತ್ರಾಲಯ ಹಾಗೂ ರಾಯಚೂರಿನ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ್ದಾರೆ.
ರಾಯಚೂರಿನ ಗಾಂಧಿ ವೃತ್ತದಲ್ಲಿನ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿನೋದ್ ಪ್ರಭಾಕರ್, ನನಗೆ ನಮ್ಮ ತಂದೆಯವರಿಗೆ ಉತ್ತರ ಕರ್ನಾಟಕದಿಂದ ಒಳ್ಳೆಯ ಅಭಿಮಾನ ಬಳಗ ಇದೆ. ಈ ಕಡೆ ಜನ ನಮಗೆ ತುಂಬಾ ಬೆಂಬಲ ಕೊಡುತ್ತಾರೆ. ಬೆಳಗ್ಗೆ ಮಂತ್ರಾಲಯ ರಾಯರ ಮಠಕ್ಕೆ ಹೋಗಿ ಆಶಿರ್ವಾದ ಪಡೆದಿದ್ದೇವೆ. ಜೂನ್ 6 ಕ್ಕೆ ಮಾದೇವ ಸಿನಿಮಾ ತೆರೆಗೆ ಬರುತ್ತಿದೆ. ಇಡೀ ಚಿತ್ರ ತಂಡ ಪ್ರಚಾರ ನಡೆಸಿದ್ದೇವೆ. ಎಲ್ಲರೂ ಹರಸಿ ಹಾರೈಸಬೇಕು ಎಂದರು.
ರಾಯರ ಮಠದಲ್ಲಿ ಉರುಳು ಸೇವೆ ಮಾಡಬೇಕು ಎಂದು ಮೊದಲೇ ಅಂದುಕೊಂಡಿದ್ದೆ. ಮಠಕ್ಕೆ ಬರಲು ಆಗಿರಲಿಲ್ಲ. ಹಾಗಾಗಿ ಈಗ ಉರುಳು ಸೇವೆ ಮಾಡಿದ್ದೇನೆ. ನಾನು ರಾಯರು ಹಾಗೂ ಬಾಬಾ ಭಕ್ತ. ನಮ್ಮ ಸಿನಿಮಾಗೆ ಗುರು ಬಲ ಸಿಗಲಿ ಎಂದು ಬೇಡಿಕೊಂಡಿದ್ದೇನೆ ಎಂದು ಹೇಳಿದರು.
ಇನ್ನೂ ಮೈಸೂರು ಸ್ಯಾಂಡಲ್ ಸೋಪ್ಗೆ ತಮನ್ನಾ ಭಾಟಿಯಾ ಬ್ರ್ಯಾಂಡ್ ಅಂಬಾಸಿಡರ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಪುನೀತ್ ಸರ್ ನಮ್ಮ ನಂದಿನಿ ಹಾಲಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ನಮ್ಮಲ್ಲೂ ಚರ್ಚೆ ನಡೆದಿದೆ, ಚಿತ್ರರಂಗದವರು ಚರ್ಚೆ ಮಾಡುತ್ತಿದ್ದಾರೆ. ನಮ್ಮವರು ಬ್ರ್ಯಾಂಡ್ ಅಂಬಾಸಿಡರ್ ಖಂಡಿತ ಆಗೇ ಆಗುತ್ತಾರೆ. ಅವಕಾಶ ಸಿಕ್ಕರೆ ನಮ್ಮ ಕನ್ನಡದ್ದು ನಾನು ಪ್ರಮೋಷನ್ ಮಾಡೇ ಮಾಡುತ್ತೇನೆ ಎಂದು ತಿಳಿಸಿದರು.