
ಉಡುಪಿ: ಜಿಲ್ಲಾಸ್ಪತ್ರೆಗಳ ಆವರಣದಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳ ತೆರವು ರಾಜ್ಯ ಕಾಂಗ್ರೆಸ್ ಸರಕಾರದ ಕೀಳು ಮಟ್ಟದ ರಾಜಕಾರಣಕ್ಕೆ ಹಿಡಿದ ಕೈಗನ್ನಡಿ ಎಂದು ಬಿ.ಜೆ.ಪಿ ಆಕ್ರೋಶ ವ್ಯಕ್ತ ಪಡಿಸಿದೆ. ಕೇಂದ್ರ ಸರ್ಕಾರದ ಯೋಜನೆ ಎಂದು ಸರ್ಕಾರ ವಿರೋಧ ಮಾಡುತ್ತಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದ್ದಾರೆ.

j3tvkannada
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಜನಪರ ಯೋಜನೆಯಾದ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ರಾಜ್ಯಾದ್ಯಂತ ಎಲ್ಲಾ ಜಿಲ್ಲಾಸ್ಪತ್ರೆಗಳ ಆವರಣದಿಂದ ತೆರವುಗೊಳಿಸಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಕ್ರಮ ಕೀಳುಮಟ್ಟದ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬಿ.ಜೆ.ಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಡವರಿಗೆ ಕೈಗೆಟಕುವ ದರದಲ್ಲಿ ಔಷಧಿಗಳು ದೊರಕಬೇಕು, ಯಾವುದೇ ಔಷಧಿಗಳ ಕೊರತೆಯಿಂದ ಬಡವರು ಪ್ರಾಣ ಕಳೆದುಕೊಳ್ಳುವಂತಾಗಬಾರದು ಎಂಬ ಸದುದ್ಧೇಶದಿಂದ ಕೇಂದ್ರ ಸರಕಾರ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ದೇಶಾದ್ಯಂತ ತೆರೆಯುವ ಮೂಲಕ ಬಡ ಜನತೆಯ ಆರೋಗ್ಯ ಸಂರಕ್ಷಣೆಗೆ ವಿಶೇಷ ಕೊಡುಗೆಯನ್ನು ನೀಡಿದೆ ಎಂದು ಕಿಶೋರ್ ಕುಮಾರ್ ಅಭಿಪ್ರಾಯ ಪಟ್ಟರು.
ಜನೌಷಧಿ ಕೇಂದ್ರದ ನಾಮಫಲಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಇರುವುದನ್ನು ಸಹಿಸದ ರಾಜ್ಯ ಸರಕಾರ ಜಿಲ್ಲಾಸ್ಪತ್ರೆಗಳಲ್ಲಿ ಉಚಿತ ಔಷಧಿಗಳ ಸಮರ್ಪಕ ವ್ಯವಸ್ಥೆಯನ್ನೂ ಮಾಡದೆ ಕೇವಲ ದ್ವೇಷ ರಾಜಕಾರಣಕ್ಕಾಗಿ ಜನೌಷಧಿ ಕೇಂದ್ರಗಳನ್ನು ತೆರವುಗೊಳಿಸಿ ಬಡವರ ಜೀವನದಲ್ಲಿ ಚೆಲ್ಲಾಟವಾಡುತ್ತಿರುವುದು ಅತ್ಯಂತ ಖಂಡನೀಯ ಎಂದು ಜಿಲ್ಲಾಧ್ಯಕ್ಷರು ಹೇಳಿದ್ದಾರೆ.
ಜಿಲ್ಲಾಸ್ಪತ್ರೆಗಳಲ್ಲಿ ಎಲ್ಲಾ ಔಷದಿಗಳು ಉಚಿತವಾಗಿ ದೊರೆಯುತ್ತದೆ ಎಂಬ ಆರೋಗ್ಯ ಸಚಿವ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿಯೂ ಆಗಿರುವ ದಿನೇಶ್ ಗುಂಡೂರಾವ್ ಅವರ ಹೇಳಿಕೆಯನ್ನಾಧರಿಸಿ ಸುದ್ದಿ ಮಾಧ್ಯಮವೊಂದು ಕೆಲವು ಪ್ರಮುಖ ಜಿಲ್ಲಾಸ್ಪತ್ರೆಗಳಿಗೆ ಭೇಟಿ ನೀಡಿ ಉಚಿತ ಔಷದಿಗಳ ಲಭ್ಯತೆಯ ಕುರಿತು ರಿಯಾಲಿಟಿ ಚೆಕ್ ನಡೆಸಿದಾಗ ಯಾವುದೇ ಅಗತ್ಯ ಔಷದಿಗಳು, ಮಾತ್ರೆಗಳು ಜಿಲ್ಲಾಸ್ಪತ್ರೆಗಳಲ್ಲಿ ಲಭ್ಯವಿಲ್ಲ ಎಂಬ ಆಘಾತಕಾರಿ ಅಂಶ ಬಯಲಾಗಿದೆ. ಬಡವರು ಜಿಲ್ಲಾಸ್ಪತ್ರೆಗಳಲ್ಲಿ ಔಷದಿಗಾಗಿ ಪರದಾಟ ನಡೆಸುವ ದಯನೀಯ ಸ್ಥಿತಿ ರಾಜ್ಯ ಸರಕಾರದ ಬೇಜವಾಬ್ದಾರಿತನವನ್ನು ಜಗಜ್ಜಾಹೀರುಗೊಳಿಸಿದೆ ಎಂದು ಕಿಶೋರ್ ಕುಮಾರ್ ಹೇಳಿದ್ದಾರೆ.
ರಾಜ್ಯ ಸರಕಾರ ಜನರ ಸಂಕಷ್ಟವನ್ನು ಅರ್ಥೈಸಿಕೊಂಡು ಆರೋಗ್ಯ ಸಂರಕ್ಷಣೆಯ ವಿಚಾರದಲ್ಲಿ ಯಾವುದೇ ರಾಜಕೀಯ ಲಾಭದ ಲೆಕ್ಕಾಚಾರವನ್ನು ಹಾಕದೇ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ಅರೋಗ್ಯ ಸೇವೆಯನ್ನು ನೀಡುವ ಜೊತೆಗೆ ಎಲ್ಲಾ ರೀತಿಯ ಅಗತ್ಯ ಔಷದಿಗಳ ಪೂರೈಕೆಗೆ ತುರ್ತು ಕ್ರಮ ವಹಿಸಬೇಕು ತಪ್ಪಿದಲ್ಲಿ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳ ಮರುಸ್ಥಾಪನೆಗೆ ಮುಂದಾಗಬೇಕು ಎಂದು ಜಿಲ್ಲಾಧ್ಯಕ್ಷರು ಸರಕಾರವನ್ನು ಅಗ್ರಹಿಸಿದ್ದಾರೆ.
ಜಿಲ್ಲಾಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರಗಳನ್ನು ತೆರವುಗೊಳಿಸಿ ಬಡವರ ಪಾಲಿಗೆ ಮರಣ ಶಾಸನ ಬರೆದಿರುವ ಜೊತೆಗೆ ವಿಪರೀತ ಬೆಲೆ ಏರಿಕೆ, ಹಾಲು ಉತ್ಪಾದಕರ ಸಬ್ಸಿಡಿ ಕಡಿತ ಸಹಿತ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್, ರೈತ ವಿದ್ಯಾನಿಧಿ, ಭಾಗ್ಯಲಕ್ಷ್ಮಿ, ಉಚಿತ ಬೈಸಿಕಲ್ ವಿತರಣೆ ಮುಂತಾದ ಬಿ.ಜೆ.ಪಿ ಆಡಳಿತಾವಧಿಯ ಜನಪರ ಯೋಜನೆಗಳಿಗೆ ರಾಜ್ಯದ ಪಾಲಿನ ಅನುದಾನವನ್ನು ನೀಡದೆ ಎಳ್ಳು ನೀರು ಬಿಟ್ಟಿರುವ ಭ್ರಷ್ಟ ಕಾಂಗ್ರೆಸ್ ಸರಕಾರದ ದುರಾಡಳಿತದಿಂದ ರಾಜ್ಯದ ಜನತೆ ರೋಸಿಹೋಗಿದ್ದು ರಾಜ್ಯ ಸರಕಾರದ ಜನವಿರೋಧಿ ನೀತಿಗೆ ಸೂಕ್ತ ಸಮಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.