
ದಕ್ಷಿಣ ಕನ್ನಡ: ರಜಾ ದಿನಗಳಲ್ಲಿ ಜನ ಹೆಚ್ಚಾಗಿ ಮಾಲ್, ದೇವಸ್ಥಾನ, ಅಮ್ಯೂಸ್ಮೆಂಟ್ ಪಾರ್ಕ್ ಹೀಗೆ ಎಲ್ಲಾ ಕಡೆಗಳಿಗೂ ಭೇಟಿ ನೀಡಿ ಮಜಾ ಮಾಡುತ್ತಾರೆ. ಅದೇ ರೀತಿ ಸಂಜೆ ವೇಳೆಗೆ ಜನ ಹೆಚ್ಚಾಗಿ ಭೇಟಿ ನೀಡೋ ಫೇವರೇಟ್ ಸ್ಪಾಟ್ ಎಂದರೆ ಅದು ಬೀಚ್. ಬೀಚ್ಗೆ ಬರೋರು ಒಂದು ಕಡೆಯಲ್ಲಿ ಸಮುದ್ರದ ಅಲೆಗಳಿಗೆ ಮೈಯೊಡ್ಡಿ ನೀರಾಟ ಆಡಿದರೆ, ಇನ್ನು ಕೆಲವರು ವಾಲಿಬಾಲ್, ಕ್ರಿಕೆಟ್ ನಂತಹ ಆಟವನ್ನು ಆಡುತ್ತಾರೆ. ಮಕ್ಕಳು ಹೊಯಿಗೆಯಲ್ಲಿ ಆಟವಾಡುತ್ತಿರುತ್ತಾರೆ. ಆದರೆ ಇನ್ನು ಕೆಲವರು ಬೀಚ್ಗೆ ಬಂದು ಮೀನು ಹಿಡಿಯಲು ಗಾಳಹಿಡಿದು ನಿಲ್ಲುವ ದೃಶ್ಯಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ಮೋಟಾರು ಚಾಲಿತ ಫಿಶಿಂಗ್ ರಾಡ್ ಜೊತೆ ಕಡಲ ತೀರದ್ದಲ್ಲಿ ನಿಂತು ಮೀನಿಗಾಗಿ ಗಾಳ ಹಾಕುತ್ತಾರೆ.

j3tvkannada
ಕಡಲಲ್ಲಿ ಕೇವಲ 50 ರಿಂದ 100 ಮೀಟರ್ ನಷ್ಟು ದೂರಕ್ಕೆ ಈ ಫಿಶಿಂಗ್ ರಾಡ್ ನಲ್ಲಿರುವ ನೈಲಾನ್ ದಾರ ತಲುಪುತ್ತದೆ. ಸಣ್ಣಪುಟ್ಟ ಆಹಾರ ಹುಡುಕಿಕೊಂಡು ಕಡಲ ತೀರಕ್ಕೆ ಬರುವ ಮೀನುಗಳು ಈ ಗಾಳಕ್ಕೆ ಸಿಲುಕಿಕೊಂಡರೆ ಗಾಳ ಹಾಕುವವರಿಗೆ ಖುಷಿ, ಸಿಕ್ಕಿಲ್ಲಾ ಅಂದರೆ ಬೇಸರವೇನಿಲ್ಲ. ಸಂಜೆಯಿಂದ ರಾತ್ರಿ ತನಕ ಗಾಳ ಹಾಕುತ್ತಲೇ ಇರುವ ಇವರಿಗೆ ಒಮ್ಮೊಮ್ಮೆ ಭರ್ಜರಿ ಮೀನುಗಳು ಸಿಕ್ಕರೆ, ಕೆಲವು ಸಮಯದಲ್ಲಿ ಒಂದೂ ಮೀನೂ ಸಿಗದ ದಿನಗಳಿವೆ. ಹವ್ಯಾಸಕ್ಕಾಗಿ ಗಾಳ ಹಾಕುವ ಇವರು ಮೀನುಗಳನ್ನು ತಮ್ಮ ಗಾಳಕ್ಕೆ ಸಿಲುಕಿಸಿಕೊಳ್ಳಲು ಗಾಳದ ತುದಿಗೆ ಸೀಗಡಿ ಮೀನುಗಳನ್ನು ಪೋಣಿಸಿಡುತ್ತಾರೆ. ಸೀಗಡಿ ಮೀನಿನ ಆಸೆಯಿಂದ ಬಾಯಿ ಹಾಕುವ ಮೀನುಗಳು ಗಾಳಕ್ಕೆ ಸಿಲುಕಿದ ತಕ್ಷಣ ದಾರವನ್ನು ಎಳೆದು ಮೀನನ್ನು ಪಡೆಯೋದು ಇವರ ದೈನಂದಿನ ಕೆಲಸ.