
ವಿಜಯಪುರ: ತಾಲ್ಲೂಕಿನ ಹಲವೆಡೆ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಹಣೆಯ ಕೊರತೆಯಿಂದ ಸ್ಥಗಿತಗೊಳ್ಳುತ್ತಿದ್ದು, ಕುಡಿಯುವ ನೀರಿಗೆ ಜನ ಪರದಾಟ ನಡೆಸಿದ್ದಾರೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಾಹಿತಿಯಂತೆ ಇಂಡಿ ತಾಲ್ಲೂಕಿನಲ್ಲಿ ಒಟ್ಟು 190 ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದು, ಈ ಪೈಕಿ 46 ಘಟಕಗಳು ಸಕ್ರಿಯವಾಗಿದ್ದರೆ, ಏಪ್ರಿಲ್ ವರೆಗೆ 144 ಘಟಕಗಳು ಸ್ಥಗಿತಗೊಂಡಿವೆ.

j3tvkannada
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು ಜನಸಾಮಾನ್ಯರಿಗೆ ಸರಿಯಾಗಿ ತಲುಪುತ್ತಿಲ್ಲ ಎನ್ನುವುದಕ್ಕೆ ತಾಲ್ಲೂಕಿನಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕ ಯೋಜನೆಯ ಕಾರ್ಯನಿರ್ವಹಣೆಯೇ ಒಂದು ದೊಡ್ಡ ಉದಾಹರಣೆ. ಪಟ್ಟಣದಿಂದ ಗ್ರಾಮೀಣ ಪ್ರದೇಶದವರೆಗೂ ಶುದ್ದ ಕುಡಿಯುವ ನೀರಿನ ಘಟಕಗಳಲ್ಲಿ ಕೆಲವೊಂದಕ್ಕೆ ಸರಿಯಾದ ವಿದ್ಯುತ್ ಪೂರೈಕೆ ಇಲ್ಲ, ಕೆಲವೊಂದಕ್ಕೆ ಬಿಡಿಭಾಗಗಳ ಕೊರತೆ, ಕೆಲವು ಘಟಕಗಳು ರಿಪೇರಿ ಮಾಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಜನರು ತಾಲ್ಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆಯಿಂದ ಪರಿತಪಿಸುತ್ತಿದ್ದಾರೆ.
ಇಂಡಿ ಪಟ್ಟಣಗಳಲ್ಲಿ ಖಾಸಗಿ ಶುದ್ಧ ನೀರಿನ ಘಟಕಗಳಿವೆ. ಪಟ್ಟಣದ ಜನ ಸಾಮಾನ್ಯರು ಒಂದು ಕ್ಯಾನ್ ನೀರಿಗೆ ₹10 ಕೊಟ್ಟು ತರುತ್ತಿದ್ದಾರೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳಿಲ್ಲ. ಗ್ರಾಮೀಣರು ನಲ್ಲಿಯ ನೀರು, ಇಲ್ಲವೇ ಕೊಳವೇ ಬಾವಿಯ ನೀರಿನ್ನೇ ಕುಡಿಯಬೇಕಿದೆ. ಇದರಿಂದ ಆರೋಗ್ಯದ ಸಮಸ್ಯೆಯಾಗುತ್ತಿದೆ.
ಕಳೆದ ಮೂರು ವರ್ಷಗಳಿಂದ ಹೊಸ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಇಲಾಖೆಯಿಂದ ಅನುಮತಿ ನೀಡಿಲ್ಲ.