
ಮೈಸೂರು: ಖಾಸಗಿ ವಾಣಿಜ್ಯ ಮೋಟಾರು ಸಾರಿಗೆ ಹಾಗೂ ಸಂಬಂಧಿತ ಕಾರ್ಮಿಕರಿಗೆ ‘ನೆರವಿನಹಸ್ತ‘ ಚಾಚುವ ಯೋಜನೆಯನ್ನು ಕಾರ್ಮಿಕ ಇಲಾಖೆ ರೂಪಿಸಿದ್ದು, ಫಲಾನುಭವಿಗಳ ನೋಂದಣಿ ಮತ್ತು ಸ್ಮಾರ್ಟ್ಕಾರ್ಡ್ ವಿತರಣೆಗೆ ಚಾಲನೆ ನೀಡಿದೆ.

j3tvkannada
ಈ ಕಾರ್ಮಿಕರನ್ನು ಅಸಂಘಟಿತ ವಲಯದವರೆಂದು ಪರಿಗಣಿಸಲಾಗಿದ್ದು, ಅವರ ಕಲ್ಯಾಣಕ್ಕಾಗಿ ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿ ಮೂಲಕ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಅಪಘಾತ ಪರಿಹಾರ ಸೌಲಭ್ಯ ಮತ್ತು ಶೈಕ್ಷಣಿಕ ಧನಸಹಾಯ ಕಲ್ಪಿಸಲು ವರ್ಷಕ್ಕೆ ₹300 ಕೋಟಿ ನಿಧಿ ಸಂಗ್ರಹಿಸಲು ಸರ್ಕಾರ ತೀರ್ಮಾನಿಸಿದೆ.
ಯಾರಾರಿಗೆ ಅವಕಾಶ:-
ಖಾಸಗಿ ವಾಹನಗಳ ಚಾಲಕರು, ನಿರ್ವಾಹಕರು, ಕ್ಲೀನರ್ಗಳು, ನಿಲ್ದಾಣ ಸಿಬ್ಬಂದಿ, ಮಾರ್ಗಪರಿಶೀಲನಾ ಸಿಬ್ಬಂದಿ, ಬುಕಿಂಗ್ ಗುಮಾಸ್ತ, ನಗದು ಗುಮಾಸ್ತ, ಡಿಪೊ ಗುಮಾಸ್ತ, ಸಮಯಪಾಲಕ, ಕಾವಲುಗಾರ ಅಥವಾ ಪರಿಚಾರಕ, ಮೋಟಾರ್ ಗ್ಯಾರೇಜ್ಗಳಲ್ಲಿ ಟೈರ್ ಜೋಡಿಸುವ ಮತ್ತು ಬೇರ್ಪಡಿಸುವವರು, ಪಂಚರ್ ಹಾಕುವ ಅಂಗಡಿಗಳು, ವೀಲ್ ಬ್ಯಾಲೆನ್ಸಿಂಗ್ ಹಾಗೂ ಅಲೈನ್ಮೆಂಟ್ ಘಟಕಗಳು, ನೀರಿನಿಂದ ಸ್ವಚ್ಛಗೊಳಿಸುವ ಘಟಕ, ಮೋಟಾರು ವಾಹನ ಹೊರಕವಚ ನಿರ್ಮಾಣ ಘಟಕ, ಟಿಂಕರಿಂಗ್, ಎಲೆಕ್ಟಿಕ್ ಹಾಗೂ ಎಸಿ ಘಟಕಗಳು ಮೊದಲಾದ ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ನೋಂದಣಿ ಮಾಡಬಹುದಾಗಿದೆ.
ರಾಜ್ಯದಲ್ಲಿ ಇವರ ಸಂಖ್ಯೆ 40 ಲಕ್ಷಕ್ಕೂ ಜಾಸ್ತಿ ಇದೆ ಅಂದಾಜಿಸಲಾಗಿದೆ. https://ksuwssb.karnataka.gov.in/ಜಾಲತಾಣದ ಮೂಲಕ ನೋಂದಾಯಿಸಿ, ಸ್ಮಾರ್ಟ್ಕಾರ್ಡ್ ಪಡೆದುಕೊಂಡವರು ಸೌಲಭ್ಯ ಹೊಂದಬಹುದಾಗಿದೆ. ಈ ಕಾರ್ಮಿಕರು ಅಪಘಾತಗಳಿಗೆ ತುತ್ತಾಗಿ ಮೃತಪಟ್ಟರೆ ಅಥವಾ ಅಂಗವೈಕಲ್ಯಕ್ಕೆ ಒಳಗಾದರೆ, ಅವರ ದುಡಿಮೆಯನ್ನೇ ಅವಲಂಬಿಸಿರುವ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತವೆ. ಇಂತಹ ಸಂದರ್ಭದಲ್ಲಿ ಪರಿಹಾರ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ.
ನೋಂದಣಿಗೆ ಹೇಗೆ:-
ಯೋಜನೆಯಡಿ 18ರಿಂದ 50 ವರ್ಷದವರು ₹ 50 ಪಾವತಿಸಿ 3 ವರ್ಷಗಳ ಅವಧಿಗೆ ನೋಂದಾಯಿಸಬಹುದು. ಬಳಿಕ, 3 ವರ್ಷಗಳವರೆಗೆ ನವೀಕರಿಸಲು ₹50 ಶುಲ್ಕ ಪಾವತಿಸಬೇಕು. ಯೋಜನೆಯ ಸೌಲಭ್ಯಗಳು ಕರ್ತವ್ಯದಲ್ಲಿರುವಾಗ ಹಾಗೂ ಇಲ್ಲದಿರುವಾಗಲೂ ಸಿಗುತ್ತವೆ. ಆದಾಯ ತೆರಿಗೆ ಪಾವತಿದಾರರಿಗೆ ಅನ್ವಯಿಸುವುದಿಲ್ಲ. ಚಾಲಕರು ಊರ್ಜಿತ ಚಾಲನಾ ಪರವಾನಗಿ ಹೊಂದಿರುವುದು ಕಡ್ಡಾಯ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಚೇತನ್ಕುಮಾರ್ ತಿಳಿಸಿದರು. ಮೈಸೂರು ಜಿಲ್ಲೆಯಲ್ಲಿ 50ಸಾವಿರಕ್ಕೂ ಹೆಚ್ಚಿನ ಮಂದಿ ಇದ್ದು, ಕಾರ್ಮಿಕರ ದಿನವಾದ ಗುರುವಾರ (ಮೇ 1) ನೋಂದಣಿ ಮಾಡಲಾಗುವುದು. ಮೋಟಾರು ಸಾರಿಗೆ ಹಾಗೂ ಇತರ ಸಂಬಂಧಿತ ಕಾರ್ಮಿಕರಿಗೆ ಯೋಜನೆ ವರದಾನವಾಗಿದೆ. ಉಚಿತ ಸಹಾಯವಾಣಿ 155214 ಮೂಲಕ ಮಾಹಿತಿ ಪಡೆದುಕೊಳ್ಳಬಹುದು ಎನ್ನುತ್ತಾರೆ.
ಸೌಲಭ್ಯಗಳೇನು?
1. ಅಪಘಾತದಿಂದ ಫಲಾನುಭವಿಗಳು ನಿಧನರಾದಲ್ಲಿ ನಾಮನಿರ್ದೇಶಿತರಿಗೆ ₹ 5 ಲಕ್ಷ ಪರಿಹಾರ.
2. ಅಪಘಾತದಲ್ಲಿ ಮೃತಪಟ್ಟ/ ಅಂಗವಿಕಲರಾದವರ ಇಬ್ಬರು ಮಕ್ಕಳಿಗೆ ಶೈಕ್ಷಣಿಕ ಸಹಾಯಧನ.
3. ಅಪಘಾತದಿಂದಾದ ಅಂಗವೈಕಲ್ಯದ ಪ್ರಮಾಣಕ್ಕೆ ಅನುಗುಣವಾಗಿ ₹ 2 ಲಕ್ಷದವರೆಗೆ ಪರಿಹಾರ.
4. 15 ದಿನಗಳಿಗಿಂತ ಕಡಿಮೆ ಅವಧಿಗೆ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದರೆ ಗರಿಷ್ಠ ₹ 50ಸಾವಿರ.
5. 15 ದಿನಗಳಿಗಿಂತ ಹೆಚ್ಚಿನ ಅವಧಿಗೆ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದಲ್ಲಿ ಗರಿಷ್ಠ ₹ 1 ಲಕ್ಷ.
6. ಸಹಜ ಮರಣ ಹೊಂದಿದವರ ಅವಲಂಬಿತರಿಗೆ ಅಂತ್ಯಸಂಸ್ಕಾರ ವೆಚ್ಚವೂ ಸೇರಿದಂತೆ ₹ 25 ಸಾವಿರ.
7. ಫಲಾನುಭವಿಯ ಪತ್ನಿಗೆ 2 ಹೆರಿಗೆಗಳಿಗೆ ಮಾತ್ರ ತಲಾ ₹ 10ಸಾವಿರ ನೆರವು.