
ಕೋಲಾರ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರಲ್ಲಿ ಉತ್ತೀರ್ಣರಾದ ಅನೇಕರು ಮತ್ತೊಮ್ಮೆ ಪರೀಕ್ಷೆ ಬರೆಯಲು ಮುಂದಾಗಿದ್ದಾರೆ. ಹೀಗಾಗಿ, ಜಿಲ್ಲೆಯಲ್ಲಿ ಪರೀಕ್ಷೆ-2ಗೆ ನೋಂದಣಿ ಮಾಡಿಕೊಂಡ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದೆ.

ದ್ವಿತೀಯ ಪಿಯುಸಿ ಪರೀಕ್ಷೆ-2 ಗುರುವಾರ ಆರಂಭವಾಗಲಿದ್ದು, ಅಂಕ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಸಾವಿರಕ್ಕೂ ಅಧಿಕ ಮಂದಿ ಮತ್ತೊಮ್ಮೆ ತಮ್ಮ ಅದೃಷ್ಟವನ್ನು ಪಣಕ್ಕೊಡ್ಡಿದ್ದಾರೆ. ಕಳೆದ ಮಾರ್ಚ್ನಲ್ಲಿ ಜಿಲ್ಲೆಯ 13,271 ಹೊಸ ಅಭ್ಯರ್ಥಿಗಳು ಪರೀಕ್ಷೆ-1 ಬರೆದಿದ್ದರು. ಆ ಪೈಕಿ 9,615 ಮಂದಿ ಉತ್ತೀರ್ಣರಾಗಿದ್ದರೆ, 3,656 ಮಂದಿ ಅನುತ್ತೀರ್ಣರಾಗಿದ್ದರು. ಆದರೆ, ಈಗ ನಡೆಯಲಿರುವ ಪರೀಕ್ಷೆ-2ಗೆ 5,878 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಅನುತ್ತೀರ್ಣರಾದವರಿಗೆ ಮತ್ತೊಂದು ಅವಕಾಶ ಒದಗಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆಯು ಪರೀಕ್ಷೆ-2 ನಡೆಸುತ್ತಿದೆ. ಅಂಕಗಳ ಸುಧಾರಣೆಗೆ ಪರೀಕ್ಷೆ ಬರೆಯುವವರಿಗೂ ಅವಕಾಶ ಕಲ್ಪಿಸಿದೆ. ಜೊತೆಗೆ ಹಾಜರಾತಿ ಕೊರತೆ, ಅನಾರೋಗ್ಯ ಸೇರಿದಂತೆ ವಿವಿಧ ಕಾರಣಗಳಿಂದ ಪರೀಕ್ಷೆ-1 ತಪ್ಪಿಸಿಕೊಂಡವರೂ ಪರೀಕ್ಷೆ-2 ಬರೆಯಬಹುದು. ಅಕಸ್ಮಾತ್ ಪರೀಕ್ಷೆ-2ರಲ್ಲಿ ಅಂಕ ಕಡಿಮೆ ಬಂದರೆ ಪರೀಕ್ಷೆ-1 ರ ಅಂಕವನ್ನೇ ಉಳಿಸಿಕೊಳ್ಳಲು ಅವಕಾಶವಿದೆ. ಹೀಗಾಗಿ, ಧೈರ್ಯದಿಂದಲೇ ಮತ್ತೊಮ್ಮೆ ಪರೀಕ್ಷೆ ಬರೆಯಲು ಸಜ್ಜಾಗಿದ್ದಾರೆ. ಜಿಲ್ಲೆಯಲ್ಲಿ ಪರೀಕ್ಷೆ-2ಗೆ 3,032 ಬಾಲಕರು ಹಾಗೂ 2,846 ಬಾಲಕಿಯರು ಒಟ್ಟು 5,878 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಕಲಾ ವಿಭಾಗದಲ್ಲಿ 835, ವಾಣಿಜ್ಯ ವಿಭಾಗದಲ್ಲಿ 2,538 ಹಾಗೂ ವಿಜ್ಞಾನ ವಿಭಾಗದಲ್ಲಿ 2,505 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.