
ಬಳ್ಳಾರಿ : ಹೊರವಲಯದ ಕಪ್ಪಗಲ್ಲು ಗ್ರಾಮದ ಕೋಳಿ ಫಾರಂವೊಂದರಲ್ಲಿ ವಾರದಿಂದ ಈಚೆಗೆ 8 ಸಾವಿರ ಕೋಳಿಗಳು ಸಾವಿಗೀಡಾಗಿದ್ದು, ಹಕ್ಕಿ ಜ್ವರ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ರವಿ ಎಂಬುವರಿಗೆ ಸೇರಿದ ಕೋಳಿ ಫಾರಂನಲ್ಲಿ ಮೊದಲು 15 ಸಾವಿರ ಕೋಳಿಗಳಿದ್ದವು. ಈವರೆಗೆ 8 ಸಾವಿರ ಕೋಳಿಗಳು ಭಾನುವಾರ ಬೆಳಗ್ಗೆ 10 ಗಂಟೆಗೆ ಮೃತಪಟ್ಟಿವೆ. ಸದ್ಯ 7 ಸಾವಿರ ಕೋಳಿಗಳು ಮಾತ್ರವೇ ಉಳಿದಿವೆ. ಇನ್ನೂ, ಹೆಚ್ಚಿನ ಪ್ರಮಾಣದಲ್ಲಿ ಕೋಳಿಗಳು ಸಾಯುವ ಸಾಧ್ಯತೆಗಳಿವೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ತಿಳಿಸಿದೆ.
ಮೃತಪಟ್ಟ ಕೋಳಿಗಳ ಮಾದರಿಗಳನ್ನು ಬೆಂಗಳೂರಿಗೆ ಕಳುಹಿಸಲಾಗಿದೆ. ಅದನ್ನು ಭೋಪಾಲ್ನಲ್ಲಿರುವ ರಾಷ್ಟ್ರೀಯ ಉನ್ನತ ಭದ್ರತಾ ಪ್ರಾಣಿ ರೋಗಗಳ ಸಂಸ್ಥೆಗೆ ರವಾನಿಸಿ ಪರೀಕ್ಷೆ ಮಾಡಿಸಲಾಗುತ್ತದೆ. ಮಂಗಳವಾರದ ವೇಳೆಗೆ ವರದಿ ಬರಬಹುದು. ಹಕ್ಕಿ ಜ್ವರ ಇರುವುದು ದೃಢಪಟ್ಟರೆ, ಉಳಿದ ಕೋಳಿಗಳನ್ನೂ ವಧೆ ಮಾಡಲಾಗುವುದು” ಎಂದು ಇಲಾಖೆಯ ಉಪನಿರ್ದೇಶಕ ಡಾ.ಕಾರಬಾರಿ ತಿಳಿಸಿದರು.
“ಜಿಲ್ಲೆಯಲ್ಲಿ ಹಕ್ಕಿ ಜ್ವರ ತಡೆಯಲು ಮತ್ತು ಪರಿಶೀಲಿಸಲು ಪಶು ಸಂಗೋಪನಾ ಇಲಾಖೆ 10 ತಂಡಗಳನ್ನು ರಚಿಸಿದೆ. ಈ ತಂಡಗಳು ನಿತ್ಯ ಇಲಾಖೆಗೆ ವರದಿ ನೀಡಲಿವೆ. ಜಿಲ್ಲೆಯು ಆಂಧ್ರ ಪ್ರದೇಶದೊಂದಿಗೆ ಗಡಿ ಹಂಚಿಕೊಂಡಿದ್ದು, ಚೆಕ್ಪೋಸ್ಟ್ಗಳಲ್ಲೂ ಪರಿಶೀಲನೆ ನಡೆಯುತ್ತಿದೆ. ಬಳ್ಳಾರಿಯಲ್ಲಿ ಒಟ್ಟು 74 ಕೋಳಿ ಫಾರಂಗಳಿವೆ. 14 ಮೊಟ್ಟೆ ಸಂವರ್ಧನಾ ಕೇಂದ್ರಗಳಿವೆ. ಇವುಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ” ಎಂದರು.
ಕೋಳಿ ಮಾರಾಟ, ಆಹಾರ ನಿಷೇಧ: ಸಂಡೂರು ತಾಲೂಕಿನ ಕುರೇಕುಪ್ಪದ ಜಾನುವಾರು ಸಂವರ್ಧನಾ ಕೇಂದ್ರದಲ್ಲಿ ಹಕ್ಕಿ ಜ್ವರದಿಂದ 2,400 ಕೋಳಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ಕುರೇಕುಪ್ಪ ಪುರಸಭೆ ಮತ್ತು ತೋರಣಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋಳಿ ಮತ್ತು ಮೊಟ್ಟೆ ಮಾರಾಟ ನಿಷೇಧಿಸಲಾಗಿದೆ. ಹೊಟೇಲ್ ಮತ್ತು ಡಾಬಾಗಳಲ್ಲಿ, ರಸ್ತೆ ಬದಿಯ ತಳ್ಳುವ ಬಂಡಿಗಳಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆ ಬಳಸಿ, ಆಹಾರ ಪದಾರ್ಥ ಸಿದ್ಧಪಡಿಸದಂತೆ ಸೂಚಿಸಲಾಗಿದೆ. ಕುರೆಕುಪ್ಪ ಗ್ರಾಮದ ಒಂದು ಕಿಮೀ ವ್ಯಾಪ್ತಿಯನ್ನು ಪಶು ಇಲಾಖೆ ಈಗಾಗಲೇ ಅಪಾಯಕಾರಿ ವಲಯ ಎಂದು ಗುರುತಿಸಿದೆ. ತೋರಣಗಲ್ಲು, ಕುರೆಕುಪ್ಪ, ವಡ್ಡು, ತಾಳೂರು, ಬಸ್ಸಾಪುರ, ದರೋಜಿ, ದೇವಲಾಪುರ ಸೇರಿ 10 ಕಿಮೀ ವ್ಯಾಪ್ತಿ ಪ್ರದೇಶವನ್ನು ಕಣ್ಣಾವಲು ಪ್ರದೇಶ ಎಂದು ಗುರುತಿಸುವ ಮೂಲಕ ಹಕ್ಕಿ ಜ್ವರ ಉಲ್ಬಣಗೊಳ್ಳದಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮುಂಜಾಗ್ರತೆ ಕ್ರಮ ಕೈಗೊಂಡಿದೆ.
ಹಕ್ಕಿಜ್ವರ ಭಯ ಬೇಡ, ಎಚ್ಚರವಿರಲಿ: ಹಕ್ಕಿ ಜ್ವರ ವೈರಾಣುಗಳಿಂದ ಹರಡುತ್ತದೆ. ಸೋಂಕು ತಗುಲಿದ ಹಕ್ಕಿಗಳು ವಿಸರ್ಜಿಸುವ ಮಲ-ಮೂತ್ರದಿಂದ ರೋಗ ಹರಡುತ್ತದೆ. ಜೊತೆಗೆ ಆ ಹಕ್ಕಿಗಳ ಶ್ವಾಸೋಚ್ವಾಸ ಕ್ರಿಯೆ ಮತ್ತು ರಕ್ತದಿಂದ ಹರಡುತ್ತದೆ ಎಂದು ಅಧಿಕಾರಿಗಳು ಹಕ್ಕಿಜ್ವರದ ಲಕ್ಷಣಗಳ ಬಗ್ಗೆ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಲು ಮುಂದಾಗಿದ್ದಾರೆ.