
ಕಲಬುರಗಿ: ನಿರಂತರವಾಗಿ ಏರುಗತಿಯಲ್ಲಿರುವ ತಾಪಮಾನ ಜನರನ್ನು ಕಂಗೆಡಿಸಿದೆ. ದೇಹ ತಂಪಾಗಿರಿಸಿಕೊಳ್ಳಲು ಅವರು ಈಜಿನತ್ತ ಮುಖ ಮಾಡುತ್ತಿರುವುದು ಸಾಮಾನ್ಯವಾಗಿದೆ. ಇದರಿಂದ ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದ ಸಮುಚ್ಛಯದಲ್ಲಿರುವ ಈಜುಕೊಳ ಪ್ರತಿದಿನ ಜನರಿಂದ ತುಂಬಿ ತುಳುಕುತ್ತಿದೆ.

ಹವ್ಯಾಸಿ ಹಾಗೂ ಸ್ಪರ್ಧಾತ್ಮಕ ಈಜು ಸ್ಪರ್ಧಿಗಳು ಸೇರಿ ಹಿಂದಿನ ವರ್ಷಕ್ಕಿಂತ ಸುಮಾರು 200 ಹೆಚ್ಚಿನ ಸ್ಪರ್ಧಿಗಳು ಈ ಬಾರಿ ನೋಂದಾಯಿಸಿಕೊಂಡಿದ್ದು, ಬಿಸಿಲಿನ ಪ್ರಖರತೆಗೆ ಸಾಕ್ಷಿ. ಪ್ರತಿದಿನ ಏಳು ಬ್ಯಾಚ್ಗಳನ್ನು ಮಾಡಲಾಗುತ್ತಿದೆ. ಮಹಿಳೆಯರಿಗಾಗಿ ಪ್ರತ್ಯೇಕ ಬ್ಯಾಚ್ ಇದೆ. 60ಕ್ಕಿಂತ ಹೆಚ್ಚು ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ. ಈಜುಕೊಳಕ್ಕೆ ಬರುವವರು ಕ್ಯಾಪ್, ಸಮವಸ್ತ್ರ ಸೇರಿದಂತೆ ಇತರ ಪರಿಕರಗಳನ್ನು ತಾವೇ ತರಬೇಕು. 50 ಮೀಟರ್ ಅಗಲ ಮತ್ತು 21 ಮೀಟರ್ ಅಗಲ ಇರುವ ಈ ಕೊಳ ಗರಿಷ್ಠ 6 ಅಡಿ ಆಳ ಹೊಂದಿದೆ. ನಾಲ್ಕು ಜನ ಜೀವರಕ್ಷಕರು ಸೇರಿ 12 ಜನ ನಿರ್ವಹಣಾ ಸಿಬ್ಬಂದಿ ಇದ್ದಾರೆ. ಮಹಿಳೆ ಮತ್ತು ಪುರುಷರಿಗಾಗಿ ಪ್ರತ್ಯೇಕ ಕೋಚ್ಗಳು ಇದ್ದಾರೆ. ಸ್ನಾನಕೊಳ ಮತ್ತು ಷವರ್ ವ್ಯವಸ್ಥೆಯೂ ಇಲ್ಲಿದೆ. ಪ್ರತಿದಿನ ಒಂದು ತಾಸು ಸಮಯ ಈಜಬಹುದಾಗಿದೆ.
ಹಿಂದಿನ ವರ್ಷ ಸುಮಾರು 1,000 ಮಂದಿ ಈಜಿಗಾಗಿ ನೋಂದಾಯಿಸಿಕೊಂಡಿದ್ದರು. ಈ ಬಾರಿ ಆ ಸಂಖ್ಯೆ 1,200 ದಾಟಿದೆ. ಇದು ಇನ್ನೂ ಆರಂಭ ಏಪ್ರಿಲ್-ಮೇ ತಿಂಗಳಲ್ಲಿ ಈ ಸಂಖ್ಯೆ ಇನ್ನೂ ಅಧಿಕವಾಗಲಿದೆ ಎಂದು ಅಲ್ಲಿನ ಸಿಬ್ಬಂದಿ ಜೆ.3 ಟಿ.ವಿ ಯೊಂದಿಗೆ ಹಂಚಿಕೊಂಡಿದ್ದಾರೆ.