
ದಕ್ಷಿಣ ಕನ್ನಡ: ವಿಶ್ವದ ಮಾಡೆಲಿಂಗ್ ಲೋಕಕ್ಕೆ ಮಂಗಳೂರಿನ ಕೊಡುಗೆ ದೊಡ್ಡದಿದೆ. ಇಲ್ಲಿಂದ ಫ್ಯಾಶನ್ ಲೋಕದಲ್ಲಿ ಮಿಂಚಿದವರು ಸಾಕಷ್ಟು ಮಂದಿ ಇದ್ದಾರೆ. ಮಾಡೆಲಿಂಗ್ ಮೂಲಕ ಸಾಧನೆ ಮಾಡಿ ಬಾಲಿವುಡ್, ಸ್ಯಾಂಡಲ್ವುಡ್ನಲ್ಲೂ ಮಿಂಚಿದ್ದಾರೆ. ಇದೀಗ ಬಹರೈನ್ ನಲ್ಲಿ ನಡೆಯುವ ಫ್ಯಾಶನ್ ಶೋಗೆ ಮಂಗಳೂರಿನ 7 ಯುವತಿಯರು ಆಯ್ಕೆಯಾಗಿದ್ದು, ಕಿರೀಟ ಗೆಲ್ಲುವ ನಿರೀಕ್ಷೆ ಹೊಂದಿದ್ದಾರೆ. ಬಾಲಿವುಡ್ ನಟಿ ಐಶ್ವರ್ಯಾ ರೈ ಸೇರಿದಂತೆ ಹಲವು ಮಂದಿ ಮಂಗಳೂರು ಮೂಲದ ಯುವತಿಯರು ಫ್ಯಾಶನ್ ಲೋಕದಲ್ಲಿ ಸಾಧನೆ ಮಾಡಿದ್ದಾರೆ. ಮಂಗಳೂರಿನಲ್ಲಿ ಯುವತಿಯರಲ್ಲಿ ಫ್ಯಾಶನ್ ಲೋಕದ ಬಗ್ಗೆ ಆಸಕ್ತಿ ಹೆಚ್ಚು. ಈ ಕಾರಣದಿಂದ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಚ್ಚಾಗಿ ಮಂಗಳೂರು ಹುಡುಗಿಯರು ಕಾಣಿಸಿಕೊಳ್ಳುತ್ತಾರೆ. ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಫ್ಯಾಶನ್ ಶೋ ಸ್ಪರ್ಧೆಗೆ ಮಂಗಳೂರಿನ ಏಳು ಹುಡುಗಿಯರು ಆಯ್ಕೆಯಾಗಿದ್ದಾರೆ.

ಬಹರೈನ್ ನಲ್ಲಿ ಪ್ರತಿ ವರ್ಷ ಕುಡ್ಲೋತ್ಸವ ಎಂಬ ಅದ್ದೂರಿ ಕಾರ್ಯಕ್ರಮ ನಡೆಯುತ್ತದೆ. ಮಂಗಳೂರು ಮೂಲದವರು ನಡೆಸುವ ಈ ಕಾರ್ಯಕ್ರಮದಲ್ಲಿ ಫ್ಯಾಶನ್ ಶೋ ಕೂಡ ಒಂದು. ಈ ಬಾರಿ ಏಪ್ರಿಲ್ 4 ರಂದು ಬಹರೈನ್ ನಲ್ಲಿ ಫ್ಯಾಶನ್ ಶೋ ನಡೆಯಲಿದೆ. ಈ ಫ್ಯಾಶನ್ ಶೋ ನಲ್ಲಿ ವಿದೇಶಗಳಲ್ಲಿ ನೆಲೆಸಿರುವ ಮಂಗಳೂರು ಮೂಲದ ಯುವತಿಯರು ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಮಂಗಳೂರಿನ ವೆನ್ಜ್ ಮಾಡೆಲ್ ನಲ್ಲಿ ತರಬೇತಿಗೊಂಡ 7 ಯುವತಿಯರು ಪಾಲ್ಗೊಳ್ಳಲು ಆಯ್ಕೆಯಾಗಿದ್ದಾರೆ. ಮಂಗಳೂರಿನ ಬಲ್ಲಾಲ್ ಭಾಗ್ ನಲ್ಲಿ ಎಂಟು ತಿಂಗಳ ಹಿಂದೆ ವೆನ್ಜ್ ಮಾಡೆಲ್ ಅಕಾಡೆಮಿ ಯನ್ನು ವೆನ್ಸಿಟಾ ಡಯಾಸ್ ಎಂಬವರು ಆರಂಭಿಸಿದ್ದರು. ವೆನ್ಸಿಟಾ ಅವರು ಥೈಲ್ಯಾಂಡ್ ನಲ್ಲಿ ನಡೆದ ಅಂತರಾಷ್ಟ್ರೀಯ ಫ್ಯಾಶನ್ ಶೋ ಸ್ಪರ್ಧೆಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದರು. ಇದೀಗ ಅವರು ಸಿನಿಮಾ ನಟಿಯು ಆಗಿದ್ದಾರೆ. ಇವರು ಆರಂಭಿಸಿದ ವೆನ್ಜ್ ಮಾಡೆಲ್ ಅಕಾಡೆಮಿಯಲ್ಲಿ ತರಬೇತಿ ಪಡೆದ ಏಳು ಚೆಲುವೆಯರು ಕುಡ್ಲೋತ್ಸವಕ್ಕೆ ಆಯ್ಕೆಯಾಗಿದ್ದಾರೆ. ಮಿಸ್ ಕುಡ್ಲ 2025 ನಲ್ಲಿ ಭಾಗವಹಿಸಲು ಏಂಜೆಲ್ , ಸೋನಲ್ , ಜೆನಿಕಾ, ದಿವ್ಯ ಶ್ರೀನಿವಾಸ್, ನಿಶ್ಮಿತಾ, ಜಾಯ್ ಲಿನ್, ಅಯೋನ ಆಯ್ಕೆಯಾಗಿದ್ದಾರೆ.