

ಮುಳಬಾಗಿಲು: ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಮಹಿಳೆ ರಾಷ್ಟ್ರೀಯ ಹೆದ್ದಾರಿ 75ರ ಸೇತುವೆಯ ಮೇಲಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.
ತಾಲ್ಲೂಕಿನ ತೊಂಡಹಳ್ಳಿ ಗ್ರಾಮದ ಸುಮಮ್ಮ (45) ಮೃತ ಮಹಿಳೆ. ಪತಿ ಭಾಸ್ಕರ್ ಎಂಬುವವರ ಜೊತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಕೋಲಾರ ಕಡೆಯಿಂದ ಸ್ವಗ್ರಾಮದ ಕಡೆಗೆ ಬರುವಾಗ ಸೊಣ್ಣವಾಡಿ ಸೇತುವೆಯ ಮೇಲೆ ಘಟನೆ ನಡೆದಿದೆ. ದ್ವಿಚಕ್ರ ವಾಹನ ಸವಾರ ಭಾಸ್ಕರ್ ಅವರಿಗೂ ಗಂಭೀರ ಗಾಯಗಳಾಗಿ ಕೋಲಾರ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಾಳು ಭಾಸ್ಕರ್ ಹಾಗೂ ಪತ್ನಿ ಸುಮಮ್ಮ ಕೋಲಾರ ಸಮೀಪದ ಸಂಬಂಧಿಕರ ಮನೆಗೆ ಹೋಗಿ ಬೆಳಗ್ಗೆ ತಮ್ಮ ಗ್ರಾಮಕ್ಕೆ ಮರಳುತ್ತಿದ್ದರು. ದ್ವಿಚಕ್ರ ವಾಹನಕ್ಕೆ ಕಾರು ಅಡ್ಡ ಬಂದಿದೆ. ಏಕಾಏಕಿ ಬ್ರೇಕ್ ಹಾಕಿದಾಗ ಹಿಂಬದಿಯಲ್ಲಿದ್ದ ಸುಮಮ್ಮ ಸೇತುವೆಯ ಮೇಲಿಂದ ಕೆಳಗೆ ಬಿದ್ದು ಸಾವನ್ನಪ್ಪಿದರೆ, ಭಾಸ್ಕರ್ ಸೇತುವೆಯ ಮೇಲೆಯೇ ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದಾರೆ ಎಂದು ಸಂಬಂಧಿಕರು ತಿಳಿಸಿದರು.ಮೃತರಿಗೆ, ಮಗಳು ಹಾಗೂ ಮಗ ಇದ್ದಾರೆ. ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.