
ಶಿವಮೊಗ್ಗ : ಮಾರ್ಚ್ ತಿಂಗಳಿನಲ್ಲಿಯೇ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಬಿಸಿಲಿನ ಝಳ ಹೆಚ್ಚಾಗಿದೆ. ಜನರು ಬಿಸಿಲಿನ ತಾಪಮಾನದಿಂದ ರಕ್ಷಣೆ ಪಡೆಯಲು ನೀರು, ಎಳನೀರು, ತಂಪು ಪಾನೀಯಗಳ ಮೊರೆ ಹೋಗಿದ್ದಾರೆ. ನೆತ್ತಿ ಸುಡುವ ಬಿಸಿಲಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಜಿಲ್ಲಾಡಳಿತದ ಆರೋಗ್ಯ ಸಲಹೆಯನ್ನು ಅನುಸರಿಸುವ ಮೂಲಕ ಜನರು ತಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗೆಡೆ ಕರೆ ನೀಡಿದ್ದಾರೆ. ಆದ್ದರಿಂದ ತಾಪಮಾನ ಏರಿಕೆಯಾಗಿದೆ. ಮಾರ್ಚ್ನಿಂದ ಮೇ ತಿಂಗಳ ತನಕ ಬಿಸಿಗಾಳಿಯೂ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ವಾತಾವರಣದಲ್ಲಿ ಅನೇಕ ರೀತಿಯ ಬದಲಾವಣೆ ಉಂಟಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದ್ದು, ಜಿಲ್ಲೆಯ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಮನವಿ ಮಾಡಲಾಗಿದೆ.
ಶಿವಮೊಗ್ಗ ನಗರ ಮತ್ತು ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಬಿಸಿಲು ಹೆಚ್ಚಾಗಿದೆ. ಜನರು ಕೆಲಸದ ಒತ್ತಡದ ಜೊತೆಗೆ ಬಿಸಿಲಿನ ಧಗೆಯನ್ನು ಸಹಿಸಿಕೊಳ್ಳಬೇಕಿದೆ. ಇದರಿಂದ ಜನರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗುತ್ತಿದ್ದಾರೆ. ಒಳಾಂಗಣ ಹಾಗೂ ಹೊರಾಂಗಣ ಪ್ರದೇಶಗಳು ಹೆಚ್ಚಿನ ಉಷ್ಣತೆಯಿಂದ ಕೂಡಿರಲಿದ್ದು, ಈ ಉಷ್ಣತೆಯ ಒತ್ತಡದಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.

ಬಾಯಾರಿಕೆ ನಿರ್ಜಲೀಕರಣದ ಲಕ್ಷಣವಾಗಿದ್ದು. ಪ್ರಯಾಣ ಮಾಡುವ ಸಮಯದಲ್ಲಿ ಹಾಗೂ ಬಾಯಾರಿಕೆ ಇಲ್ಲದಿದ್ದರೂ ಸಹ ಹೆಚ್ಚೆಚ್ಚು ನೀರನ್ನು ಆಗಾಗ ಕುಡಿಯಬೇಕು ಎಂದು ಜಿಲ್ಲಾಡಳಿತ ಸಲಹೆ ನೀಡಿದೆ. ಮೌಖಿಕ ಪುನರ್ಜಲೀಕರಣ ದ್ರಾವಣ ಹಾಗೂ ಮನೆಯಲ್ಲಿಯೇ ಸಿದ್ದಪಡಿಸಿದ ನಿಂಬೆ ಹಣ್ಣಿನ ಶರಬತ್ತು, ಮಜ್ಜಿಗೆ/ ಲಸ್ಸಿ, ಹಣ್ಣಿನ ಜ್ಯೂಸ್ಗಳನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಸೇವಿಸಬೇಕು. ಈ ಋತುಮಾನದಲ್ಲಿ ಲಭ್ಯವಿರುವ ಹೆಚ್ಚಿನ ನೀರಿನಾಂಶ ಹೊಂದಿರುವ ಹಣ್ಣು ಹಾಗೂ ತರಕಾರಿಗಳನ್ನು ಸೇವಿಸಬೇಕು. ಇದರಿಂದ ದೇಹವು ಒಣಗದೆ ಚರ್ಮವು ಸದಾ ತೇವಾಂಶದಿಂದ ಕೂಡಿರುತ್ತದೆ. ಬೇಸಿಗೆ ಕಾಲದಲ್ಲಿ ಧರಿಸುವ ಬಟ್ಟೆಗಳು ಕೂಡ ದೇಹದ ಸುರಕ್ಷತೆಗೆ ಬಹುಮುಖ್ಯವಾಗಿದೆ ಎಂದು ಸಲಹೆಯನ್ನು ನೀಡಲಾಗಿದೆ.
ಈ ಹವಾಮಾನ ಪರಿಸ್ಥಿತಿಯಲ್ಲಿ ತಿಳಿ ಬಣ್ಣದ, ಅಳಕವಾದ ಹತ್ತಿಯ ಬಟ್ಟೆಯನ್ನು ಧರಿಸಬೇಕು. ಹೊರ ಹೋಗುವ ಸಂದರ್ಭದಲ್ಲಿ ಛತ್ರಿ, ಟೋಪಿ, ಟವೆಲ್ ಅಥವಾ ಇನ್ನಾವುದೇ ಸಂಪ್ರಾದಯಿಕ ಪದ್ಧತಿಯನ್ನು ಅನುಸರಿಸಿ ಬಿಸಿಲಿನಿಂದ ರಕ್ಷಣೆ ಪಡೆಯಬೇಕು. ಈ ಸಂದರ್ಭದಲ್ಲಿ ಶೂಗಳಿಗಿಂತ ಚಪ್ಪಲಿಗಳನ್ನು ಧರಿಸಬೇಕು. ಮಧ್ಯಾಹ್ನ ಅಡುಗೆ ಸಿದ್ದಪಡಿಸುವ ಪ್ರದೇಶದಲ್ಲಿ ಕಿಟಕಿ ಹಾಗೂ ಬಾಗಿಲನ್ನು ತೆರದಿಡಿ, ಮಧ್ಯಾಹ್ನ ಟೀ, ಕಾಫಿ ಮತ್ತು ಕಾರ್ಬೊನೇಟೆಡ್ ಪಾನೀಯಗಳು ಅಥವಾ ಹೆಚ್ಚು ಸಕ್ಕರೆ ಅಂಶವನ್ನು ಹೊಂದಿದ ಪಾನೀಯಗಳಿಂದ ದೂರವಿರಿ. ಇವು ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ ಅಥವಾ ಹೊಟ್ಟೆ ನೋವು ಉಂಟು ಮಾಡುತ್ತದೆ.
ಅಧಿಕವಾದ ಉಷ್ಣಾಂಶ ಮನುಷ್ಯನ ದೇಹದ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಜನರು ದಿನವಿಡಿ ಸಕ್ರಿಯವಾಗಿರಲು, ಚರ್ಮದ ರಕ್ಷಣೆಗಾಗಿ ನೀರು ಅತ್ಯಗತ್ಯವಾಗಿದೆ. ಹಾಗಾಗಿ ಬಿಸಿಲಿನ ಸಂದರ್ಭದಲ್ಲಿ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚಿನ ನೀರನ್ನು ಪೂರೈಸಬೇಕು. ಇಲ್ಲಿದಿದ್ದರೆ ಅತಿಯಾದ ಉಷ್ಣತೆಯಿಂದಾಗಿ ಸಾಧಾರಣವಾದ ಅಥವ ತ್ರೀವ ಜ್ವರ, ಗಂಧೆಗಳು, ಊತಗಳು, ಸ್ನಾಯು ಸೆಳೆತಗಳು, ಪ್ರಜ್ಞೆ ತಪ್ಪುವುದು, ಬಿಸಿಲಿನಿಂದ ಸುಸ್ತಾಗುವುದು ಹಾಗೂ ಉಷ್ಣತೆಯಿಂದ ಪಾರ್ಶ್ವವಾಯು ಉಂಟಾಗುತ್ತದೆ. ಅತಿ ಹೆಚ್ಚಿನ ಉಷ್ಣತೆ ತೀವ್ರತೆಗೆ ಹೃದ್ರೋಗ ಸಮಸ್ಯೆಗಳು, ಉಸಿರಾಟದ ಸಮಸ್ಯೆಗಳು ಹಾಗೂ ಕಿಡ್ನಿ ಸಮಸ್ಯೆಗಳು ಅಧಿಕವಾಗುತ್ತದೆ. ಜೊತೆಗೆ ಅತಿಯಾದ ಶಾಖದಿಂದ ತಲೆ ಸುತ್ತುವುದು, ಅತಿಯಾದ ಬಾಯಾರಿಕೆ, ವಾಕರಿಕೆ ಅಥವಾ ವಾಂತಿಯಾಗುವುದು, ಮೂತ್ರ ವಿಸರ್ಜನೆ ಪ್ರಮಾಣದಲ್ಲಿ ಕಡಿಮೆಯಾಗುವುದು ಹಾಗೂ ಹಳದಿ ಬಣ್ಣದ ಮೂತ್ರ, ತಲೆನೋವು, ಏರು ಗತಿಯ ಉಸಿರಾಟ ಹಾಗೂ ಹೃದಯದ ಬಡಿತದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.
ನವಜಾತ ಶಿಶುಗಳು, ಗರ್ಭಿಣಿಯರು, ವೃದ್ದರು ಎಚ್ಚರ ಬಿಸಿಗಾಳಿಯ ಒತ್ತಡ ಹಾಗೂ ಬಿಸಿ ಗಾಳಿಗೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳಿಂದ ಎಲ್ಲರಿಗೂ ಅಪಾಯವಿದ್ದು, ನವಜಾತ ಶಿಶುಗಳು ಹಾಗೂ ಚಿಕ್ಕ ಮಕ್ಕಳು, ಗರ್ಭಿಣಿಯರು, ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವವರು, ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು, ಆರೋಗ್ಯ ಸಮಸ್ಯೆಗಳಿರುವವರು ವಿಶೇಷವಾಗಿ ಹೃದ್ರೋಗ ಹಾಗೂ ರಕ್ತದ ಒತ್ತಡದಿಂದ ಬಳಲುತ್ತಿರುವವರು ಹೆಚ್ಚು ಜಾಗೂರಕತೆಯಿಂದರಬೇಕು. ಪ್ರತ್ಯೇಕವಾಗಿ/ ಒಂಟಿಯಾಗಿ ವಾಸಿಸುವ ವೃದ್ಧರ ಆರೋಗ್ಯ ಸ್ಥಿತಿಯ ಮೇಲ್ವಿಚಾರಣೆಯನ್ನು ಪ್ರತಿದಿನ ನೋಡಿಕೊಳ್ಳಬೇಕು.
ಮನೆಯ ಒಳಾಂಗಣವನ್ನು ತಣ್ಣಗಿರಿಸಲು ಪರದೆಗಳು/ ಷಟರ್ಗಳನ್ನು ಬಳಸಬೇಕು ಹಾಗೂ ರಾತ್ರಿ ಸಮಯದಲ್ಲಿ ಕಿಟಿಕಿಗಳನ್ನು ತೆರೆದಿಡಬೇಕು. ಹಗಲು ಹೊತ್ತಿನಲ್ಲಿ ಮನೆಯ ಕೆಳಗಿನ ಮಹಡಿಗಳಲ್ಲಿರುವುದು ಉತ್ತಮ, ಶರೀರವನ್ನು ತಣ್ಣಗಿಡಲು ಫ್ಯಾನ್ ಅಥವಾ ತೇವವಾದ ಬಟ್ಟೆಯನ್ನು ಬಳಸಬಹುದು. ಅತಿಯಾದ ಉಷ್ಣತೆಯಿಂದ ಆರೋಗ್ಯ ಸಮಸ್ಯೆ ಉಂಟಾದರೆ ತಕ್ಷಣವೇ ತಂಪಾದ ಸ್ಥಳಕ್ಕೆ ತೆರಳಿ ಮತ್ತು ದ್ರವಾಹಾರವನ್ನು ಸೇವಿಸಿ, ತಕ್ಷಣವೇ ಸಹಾಯ ಹಾಗೂ ವೈದ್ಯಕೀಯ ನೇರವನ್ನು ಪಡೆಯಿರಿ. ದೇಹದ ಉಷ್ಣತೆಯನ್ನು ಪರೀಕ್ಷಿಸಿ. ಮಾಂಸಖಂಡಗಳಲ್ಲಿ ಸೆಳೆತ ಕಂಡಬಂದಲ್ಲಿ ತಕ್ಷಣವೇ ತಂಪಾದ ಸ್ಥಳದಲ್ಲಿ ವಿಶ್ರಾಂತಿ ಪಡೆಯಿರಿ ಹಾಗೂ ಹೆಚ್ಚು ಎಲೆಕ್ಟ್ರೋಲೈಟ್ಗಳನ್ನು ಹೊಂದಿದ ಮೌಖಿಕ ಪುನರ್ಜಲೀಕರಣ ದ್ರಾವಣಗಳನ್ನು ಸೇವಿಸಬೇಕು.
ಅತಿಯಾದ ಉಷ್ಣತೆಯಿಂದ ಉಂಟಾಗುವ ಸ್ನಾಯು ಸೆಳೆತವು 1 ಗಂಟೆಯ ಅವಧಿಯಲ್ಲಿ ಶಮನಗೊಳ್ಳದಿದ್ದರೆ ವೈದ್ಯಕೀಯ ನೆರವನ್ನು ಪಡೆಯಬೇಕು. ಹೊರಾಂಗಣ ಚಟುವಟಿಕೆಗಳನ್ನು ಆದಷ್ಟು ದಿನದ ತಣ್ಣನೆಯ ಸಮಯದಲ್ಲಿ ಅಂದರೆ ಬೆಳಗಿನ ಹೊತ್ತು ಅಥವಾ ಸಂಜೆಗೆ ಸೀಮಿತವಿರುವಂತೆ ಬದಲಾಯಿಸಿಕೊಳ್ಳಬೇಕು. ಹೊರಾಂಗಣ ಪ್ರದೇಶಗಳಲ್ಲಿ ಆಯೋಜಿಸಲಾಗುವ ಚಟುವಟಿಕೆಗಳು ಬೆಳಗ್ಗೆ 11 ಗಂಟೆಯ ಒಳಗೆ ಮುಕ್ತಾಯಗೊಳಿಸುವುದು ಉತ್ತಮ. 11 ರಿಂದ ಸಂಜೆ 4 ಗಂಟೆ ಅವಧಿಯಲ್ಲಿ ಹೊರಾಂಗಣ ಸಭೆಗಳು/ ಚಟುವಟಿಕೆಗಳು ನಡೆಯುವ ಪ್ರದೇಶದಲ್ಲಿ ಸಾರ್ವಜನಿಕರಿಗೆ ಬಿಸಿಲಿನಿಂದ ರಕ್ಷಣೆ ನೀಡಲು ಅಗತ್ಯ ಶಾಮಿಯಾನ ವ್ಯವಸ್ಥೆ ಮಾಡುವುದು.
ಉತ್ತಮ ಗಾಳಿ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಬೇಕು. ಕುಡಿಯುವ ನೀರಿನ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು. ರೇಡಿಯೋ, ದೂರರ್ಶನ ಹಾಗೂ ದಿನಪತ್ರಿಕೆಗಳ ಮೂಲಕ ಸ್ಥಳೀಯ ಹವಾಮಾನದ ಮಾಹಿತಿಯನ್ನು ಪಡೆದು ಅದರಂತೆ ಚಟುವಟಿಕೆಗಳನ್ನು ಆಯೋಜನೆ ಮಾಡುವುದು ಉತ್ತಮ. ಈ ಕುರಿತು ಕಾಲಕಾಲಕ್ಕೆ ಮಾಹಿತಿಯನ್ನು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ.