
ತುಮಕೂರು: ಸಿದ್ದಗಂಗಾ ಮಠದ ಆರು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಆಗಿದ್ದಾರೆ. ಆ ಮೂಲಕ ಸಿದ್ದಗಂಗಾ ಮಠದ ಬಡ ಮಕ್ಕಳ ಶ್ರಮಕ್ಕೆ ಗರಿಮೆ ತಂದಿದೆ. ಕೇಂದ್ರ ಶಿಕ್ಷಣ ಸಚಿವಾಲಯದ ಸೂಚನೆಯಡಿ ನಡೆಯುವ ಕೇಂದ್ರ ಸರ್ಕಾರದ ಯೋಜನೆಯನ್ನು ಮಠದ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡಿದ್ದಾರೆ. ಸದ್ಯ ವಿದ್ಯಾರ್ಥಿಗಳ ಸಾಧನೆಗೆ ಸಿದ್ದಲಿಂಗ ಸ್ವಾಮೀಜಿಗಳಿಂದ ಶಬ್ಬಾಸ್ ಗಿರಿ ಸಿಕ್ಕಿದೆ. ರಾಷ್ಟ್ರೀಯ ಮಟ್ಟದ NMMS ವಿದ್ಯಾರ್ಥಿ ವೇತನ ಅಡಿ 8ನೇ ತರಗತಿ ವಿದ್ಯಾರ್ಥಿಗಳಿಗೆ ರಾಷ್ಟ್ರ ಮಟ್ಟದಲ್ಲಿ ಪರೀಕ್ಷೆ ನಡೆಯುತ್ತದೆ. ಈ ಪರೀಕ್ಷೆಯಲ್ಲಿ 90 ನಿಮಿಷದ 90 ಪ್ರಶ್ನೆಗೆ ಉತ್ತರ ನೀಡುವ ಮೂಲಕ ಅತ್ಯತ್ತಮ ಅಂಕ ಪಡೆದ ಸಿದ್ದಗಂಗಾ ಮಠದ ಆರು ವಿದ್ಯಾರ್ಥಿಗಳು ಆಯ್ಕೆ ಆಗಿದ್ದಾರೆ.

j3tvkannada
ಲಕ್ಷಾಂತರ ವಿದ್ಯಾರ್ಥಿಗಳು ಬರೆಯುವ ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಪಡೆಯುವ ಮೂಲಕ ಮಠದ ಗರಿಮೆ ಮತ್ತಷ್ಟು ಹೆಚ್ಚಿಸಿದ್ದಾರೆ. ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ, 8ನೇ ತರಗತಿಯಿಂದ ಪಿ.ಯು.ಸಿ ಮುಗಿಯುವರೆಗೂ ಪ್ರತಿ ತಿಂಗಳು ತಲಾ ಒಬ್ಬ ವಿದ್ಯಾರ್ಥಿಗೆ ಒಂದು ಸಾವಿರ ರೂ ಹಣ ನೀಡುತ್ತದೆ. ಮಕ್ಕಳ ಸಾಧನೆ ಕುರಿತು ಮಾತನಾಡಿದ ಸಿದ್ಧಗಂಗಾ ಮಠದ ಸಿದ್ದಲಿಂಗ ಶ್ರೀಗಳು, ಪ್ರತಿ ವರ್ಷ ನಮ್ಮ ಮಕ್ಕಳು ಕೇಂದ್ರ ಸರ್ಕಾರ ಯೋಜನೆಯ ವಿದ್ಯಾರ್ಥಿವೇತನಕ್ಕೆ ಅರ್ಹರಾಗುತ್ತಿದ್ದಾರೆ. ಈ ವರ್ಷವೂ ಪರೀಕ್ಷೆ ತೆಗೆದುಕೊಂಡು ಆರು ಮಕ್ಕಳು ಅರ್ಹರಾಗಿದ್ದಾರೆ. ಪರೀಕ್ಷೆ ಬಹಳಷ್ಟು ಕಠಿಣವಾಗಿರುತ್ತದೆ. 90 ಪ್ರಶ್ನೆ 90 ನಿಮಿಷದಂತೆ ಒಟ್ಟು ಎರಡು ಸುತ್ತಿನ ಪರೀಕ್ಷೆ ಇರತ್ತೆ. ನಿಮಿಷಕ್ಕೊಂದು ಪ್ರಶ್ನೆಗೆ ಉತ್ತರ ಬರೆಯಬೇಕು. 180 ಅಂಕ ಪಡೆದರೆ ಮಾತ್ರ ಅರ್ಹರಾಗುತ್ತಾರೆ ಎಂದು ಹೇಳಿದ್ದಾರೆ.
ಮೂರು ಜನ ಗಂಡು ಹಾಗೂ ಮೂರು ಜನ ಹೆಣ್ಣು ಮಕ್ಕಳು ಪಾಸ್ ಆಗಿ ಅರ್ಹರಾಗಿದ್ದಾರೆ. ಅವರಿಗೆ ನಾಲ್ಕು ವರ್ಷ ವಿದ್ಯಾರ್ಥಿ ವೇತನ ಸಿಗುತ್ತದೆ. ಎಲ್ಲರಿಗೂ ಈ ಪರೀಕ್ಷೆ ಇರುವುದಿಲ್ಲ. ಬಡಮಕ್ಕಳಿಗೆ ಮಾತ್ರ ಈ ಪರೀಕ್ಷೆ ನಡೆಯುತ್ತದೆ. ಹಳ್ಳಿ ಮಕ್ಕಳಿಗೆ, ಬಡ ಮಕ್ಕಳಿಗೆ ಈ ರೀತಿಯ ವಿದ್ಯಾರ್ಥಿ ವೇತನ ತುಂಬಾ ಉಪಯೋಗವಾಗಿದೆ. ಕೇಂದ್ರ ಸರ್ಕಾರದ ಉತ್ತಮ ಯೋಜನೆ ಇದು. ಮಕ್ಕಳ ಪ್ರತಿಭೆ ವಿಕಾಸವಾಗುತ್ತದೆ. ಮಕ್ಕಳ ಶಿಕ್ಷಣಕ್ಕೂ ಪೂರಕ ಸಹಕಾರವಾಗುತ್ತದೆ. ಇಂತಹ ಮಕ್ಕಳಿಗೆ ನಾನು ಅಭಿನಂದಿಸುತ್ತೇನೆ. ಈ ರೀತಿಯ ಪರೀಕ್ಷೆ ಎದುರಿಸುವ ಮುಖಾಂತರ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಮಕ್ಕಳಿಗೆ ಧೈರ್ಯ ಬರುತ್ತದೆ ಎಂದಿದ್ದಾರೆ.