
ಚಿಕ್ಕಮಗಳೂರು:ಕಾಫಿನಾಡು ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಭಾರೀ ಗಾಳಿ-ಮಳೆಗೆ ಬೃಹತ್ ಮರ ರಸ್ತೆಗೆ ಉರುಳಿ ಬಿದ್ದ ಪರಿಣಾಮ ಚಿಕ್ಕಮಗಳೂರು-ಮುಳ್ಳಯ್ಯನಗಿರಿ-ದತ್ತಪೀಠ ರಸ್ತೆ ಸಂಪೂರ್ಣ ಬಂದ್ ಆಗಿದೆ.

j3tvkannada
ಬೆಳ್ಳಂ ಬೆಳಗ್ಗೆಯೇ ಬೃಹತ್ ಮರ ರಸ್ತೆಗೆ ಬಿದ್ದ ಪರಿಣಾಮ ಪ್ರವಾಸಿಗರು ಹಾಗೂ ಸ್ಥಳೀಯರು ಪರದಾಟ ಅನುಭವಿಸುವಂತಾಗಿದೆ. ಕೈಮರದಿಂದ 4 ಕಿ.ಮೀ. ದೂರದಲ್ಲಿ ದತ್ತಪೀಠ ಹಾಗೂ ಮುಳ್ಳಯ್ಯನಗಿರಿಗೆ ಹೋಗುವ ಸರ್ಕಲ್ ಬಳಿಯೇ ಮರ ಬಿದ್ದಿದ್ದು, ಎರಡು ಸ್ಥಳಗಳಿಗೆ ಸಂಪರ್ಕ ಸಂಪೂರ್ಣ ಕಟ್ ಆಗಿದೆ. ಕಿರಿದಾದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾದ ಕಾರಣ ಸ್ಥಳೀಯರು-ಗ್ರಾಮಾಂತರ ಪೊಲೀಸರು ಮರವನ್ನು ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಸಿಗರು ಎಚ್ಚರಿಕೆಯಿಂದ ಸಂಚರಿಸುವಂತೆ ಪ್ರವಾಸಿಗರಿಗೆ ಮನವಿ ಮಾಡಿದ್ದಾರೆ. ಇನ್ನು ಕೊಪ್ಪ ತಾಲೂಕಿನ ಮೇಗುಂದಾ ಸಮೀಪದ ವೆಂಕಟರಮಣ ದೇವಸ್ಥಾನದ ಬಳಿ ಕೊಗ್ರೆ ಗ್ರಾಮಕ್ಕೆ ಹೋಗುವ ಮಾರ್ಗದಲ್ಲೂ ಬೃಹತ್ ಮರ ರಸ್ತೆಗೆ ಉರುಳಿದ್ದು, ನಾಲ್ಕೈದು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಬೃಹತ್ ಮರ ಬುಡ ಸಮೇತ ಬಿದ್ದ ಪರಿಣಾಮ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಜಯಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮರ ತೆರವು ಮಾಡಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.