
ಬೆಂಗಳೂರು: ದಿನೇ ದಿನೇ ಹೊಡೆದಾಟ ಬಡಿದಾಟಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರಿನ ಸರ್ಜಾಪುರ ರಸ್ತೆಯ ಕೈಕೊಂಡರಹಳ್ಳಿಯಲ್ಲಿ ಬಿ.ಎಂ.ಟಿ.ಸಿ ಬಸ್ ಚಾಲಕರೊಬ್ಬರ ಮೇಲೆ ಮಹಿಳೆಯೊಬ್ಬಳು ಚಪ್ಪಲಿಯಿಂದ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ನಡೆದಿದೆ. ಬಸ್ ನಿಲ್ದಾಣವಲ್ಲದ ಸ್ಥಳದಲ್ಲಿ ಬಸ್ ನಿಲ್ಲಿಸಲು ಚಾಲಕ ನಿರಾಕರಿಸಿದ ಕಾರಣಕ್ಕೆ ಈ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.

j3tvkannada
ಕೈಕೊಂಡರಹಳ್ಳಿ ಬಸ್ ನಿಲ್ದಾಣದಲ್ಲಿ ಟಿಕೆಟ್ ತೆಗೆದುಕೊಂಡ ಕಾವ್ಯ, ತನ್ನ ಕಚೇರಿಯ ಮುಂದೆ ಬಸ್ ನಿಲ್ಲಿಸುವಂತೆ ಚಾಲಕನಿಗೆ ಒತ್ತಾಯಿಸಿದ್ದಾಳೆ. ಆದರೆ, ಸಂಚಾರ ದಟ್ಟಣೆ ಮತ್ತು ನಿಯಮಗಳ ಕಾರಣದಿಂದ ಅತಹರ್ ಅವರು ಮಹಿಳೆ ಹೇಳಿದ ಕಡೆ ನಿಲ್ಲಿಸಿಲ್ಲ. ನಂತರ ಆ ಮಹಿಳೆ ಹೊಟ್ಟೆ ನೋವಿನಿಂದ ಕಿರುಚಿಕೊಂಡು ಬಸ್ ನಿಲ್ಲಿಸುವಂತೆ ಒತ್ತಾಯಿಸಿದ್ದಾಳೆ. ಇದಕ್ಕೆ ಸ್ಪಂದಿಸಿದ ಚಾಲಕ, ಬಲಕ್ಕೆ ತಿರುವು ತೆಗೆದುಕೊಂಡು ಬಸ್ ನಿಲ್ಲಿಸಿದ್ದಾರೆ. ಈ ವೇಳೆ ಕಾವ್ಯ ತನ್ನ ಚಪ್ಪಲಿಯನ್ನು ತೆಗೆದುಕೊಂಡು ಅತಹರ್ ಮೇಲೆ ಹಲ್ಲೆ ನಡೆಸಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆಯಿಂದ ಆಘಾತಗೊಂಡ ಚಾಲಕ, ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಕಾವ್ಯ ವಿರುದ್ಧ ದೂರು ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 121, 131, 132 ಮತ್ತು 352ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯಿಂದ ಸಾರ್ವಜನಿಕ ಸಾರಿಗೆ ಚಾಲಕರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಬಿ.ಎಂ.ಟಿ.ಸಿ ಚಾಲಕರು ದಿನನಿತ್ಯ ಸಂಚಾರ ದಟ್ಟಣೆ, ಪ್ರಯಾಣಿಕರ ಒತ್ತಡ ಮತ್ತು ಕರ್ತವ್ಯದ ನಿಯಮಗಳ ನಡುವೆ ಕೆಲಸ ನಿರ್ವಹಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಪ್ರಯಾಣಿಕರಿಂದ ದಾಳಿಗೊಳಗಾಗುವುದು ಅವರ ಕೆಲಸದ ಸವಾಲುಗಳನ್ನು ಮತ್ತಷ್ಟು ಹೆಚ್ಚಿಸಿದೆ. ಸ್ಥಳೀಯರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯ ಕುರಿತು ತೀವ್ರ ಚರ್ಚೆ ನಡೆದಿದ್ದು, ಕೆಲವರು ಚಾಲಕನ ನಿರಾಕರಣೆಯನ್ನು ಸಮರ್ಥಿಸಿದ್ದಾರೆ, ಇನ್ನೂ ಕೆಲವರು ಆ ಮಹಿಳೆ ಕ್ರಮವನ್ನು ಖಂಡಿಸಿದ್ದಾರೆ.
ಬಿ.ಎಂ.ಟಿ.ಸಿ ಅಧಿಕಾರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಚಾಲಕರ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಘಟನೆಯಿಂದಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಶಿಸ್ತು, ಸಹನೆ ಮತ್ತು ಸುರಕ್ಷತೆಯ ಅಗತ್ಯತೆಯ ಬಗ್ಗೆ ಮತ್ತೊಮ್ಮೆ ಗಮನ ಸೆಳೆಯಲಾಗಿದೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದು, ಇಂತಹ ಘಟನೆಗಳ ಮರುಕಳಿಕೆ ತಡೆಗೆ ಕಾನೂನು ಕ್ರಮದ ಜೊತೆಗೆ ಜಾಗೃತಿ ಕಾರ್ಯಕ್ರಮಗಳ ಅಗತ್ಯವಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.