
ವಿಜಯಪುರ: ಮಹಾರಾಷ್ಟ್ರ ಸೇರಿದಂತೆ ಕೃಷ್ಣಾ ಕಣಿವೆಯಲ್ಲಿ ಸುರಿದ ಮಳೆಯಿಂದ ಆಲಮಟ್ಟಿ ಜಲಾಶಯ ಅವಧಿಗೂ ಮುನ್ನವೇ ಅರ್ಧ ಭರ್ತಿಯಾಗಿದೆ. ವಿಜಯಪುರ, ಬಾಗಲಕೋಟೆ, ಬೆಳಗಾವಿ ಮತ್ತು ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿದ ಮಳೆಯಿಂದ ಜಲಾಶಯಕ್ಕೆ ಮೇ 19ರಿಂದಲೇ ಒಳಹರಿವು ಆರಂಭವಾಗಿತ್ತು. ಆರಂಭದಲ್ಲಿ 424 ಕ್ಯೂಸೆಕ್ ನಿಂದ ಶುರುವಾದ ಒಳಹರಿವು ಈಗ 12,134 ಕ್ಯೂಸೆಕ್ ತಲುಪಿದೆ.

j3tvkannada.in
ಮುಂಗಾರು ಪೂರ್ವ ಮಳೆಯಿಂದ ಮೇ 24 ರವರೆಗೆ ಡ್ಯಾಂಗೆ ಸಾಧಾರಣ ಒಳಹರಿವು ಇತ್ತು. 25ರಿಂದ 29ರವರೆಗೆ 35 ಸಾವಿರದಿಂದ 60 ಸಾವಿರ ಕ್ಯೂಸೆಕ್ ವರೆಗೆ ಒಳಹರಿವು ಶುರುವಾಗಿದ್ದರಿಂದ ಮುಂಜಾಗ್ರತೆ ಕ್ರಮವಾಗಿ ಮೇ 29ರಂದು ಕೆಪಿಸಿಎಲ್ ಮೂಲಕ ನದಿ ಪಾತ್ರಕ್ಕೆ 10 ಸಾವಿರ ಕ್ಯೂಸೆಕ್ ನೀರು ಹರಿಬಿಡುವ ಮೂಲಕ ಪ್ರಸಕ್ತ ಸಾಲಿನಲ್ಲಿ ಪ್ರಥಮ ಬಾರಿಗೆ ಹೊರಹರಿವು ಆರಂಭಿಸಲಾಯಿತು. ನಂತರದ ದಿನಗಳಲ್ಲಿ ಒಳಹರಿವಿನ ಪ್ರಮಾಣ ಸ್ವಲ್ಪ ಪ್ರಮಾಣದಲ್ಲಿ ಇಳಿಮುಖವಾಗಿದ್ದರಿಂದ ಹೊರಹರಿವು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮತ್ತೆ ಮಳೆ ಅರ್ಭಟ ಆರಂಭವಾಗಿದ್ದರಿಂದ ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತೆ ಕ್ರಮವಾಗಿ ಶುಕ್ರವಾರ ಬೆಳಗ್ಗೆಯಿಂದ ಮತ್ತೆ ಕೆಪಿಸಿಎಲ್ ಮೂಲಕ ನದಿ ಪಾತ್ರಕ್ಕೆ ನೀರು ಹರಿ ಬಿಡಲಾಗುತ್ತಿದೆ. ತಿಂಗಳ ಎರಡನೇ ವಾರದಲ್ಲೇ ಜಲಾಶಯ ಅರ್ಧದಷ್ಟು ಭರ್ತಿಯಾಗಿರುವುದು ದಾಖಲೆಯಾಗಿದೆ. ಕಳೆದ ಐದಾರು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿರುವುದು ಜಲಾಶಯ ಅರ್ಧ ಭರ್ತಿಯಾಗಿದೆ.