
ಧಾರವಾಡ: ಹವಾಮಾನ ಇಲಾಖೆಯ ಮೂನ್ಸೂಚನೆಯ ಪ್ರಕಾರ ಧಾರವಾಡ ಜಿಲ್ಲೆಗೆ ರೆಡ್ ಅಲರ್ಟ್ ಇರುವುದರಿಂದ ಮತ್ತು ಜಿಲ್ಲೆಯ ಬಹುತೇಕ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಿನ್ನೆ ಸಂಜೆಯಿಂದ ನಿರಂತರವಾಗಿ ಮತ್ತು ವ್ಯಾಪಕವಾಗಿ ಮಳೆ ಆಗುತ್ತಿರುವುದರಿಂದ ಶಾಲಾ ಕಾಲೇಜು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಧಾರವಾಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪಿ.ಯು ಮತ್ತು ಪದವಿ ಕಾಲೇಜುಗಳಿಗೆ ಇಂದು ಜೂ.12 ರಂದು ಒಂದು ದಿನದ ರಜೆ ಘೋಷಿಸಿಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

j3tvkannada
ಈ ಕುರಿತು ಇಂದು ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಇಂದು ಹವಾಮಾನ ಇಲಾಖೆ ವತಿಯಿಂದ ಧಾರವಾಡ ಜಿಲ್ಲೆಗೆ ರೆಡ್ ಅಲರ್ಟ್ ಸೂಚಿಸಲಾಗಿದೆ. ಮಳೆಯೂ ನಿರಂತರವಾಗಿ ಆಗುತ್ತಿರುವುದರಿಂದ ಅನೇಕ ಹಳ್ಳ ಮತ್ತು ಕೊಳ್ಳಗಳು ತುಂಬಿ ಹರಿಯುತ್ತಿವೆ ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕೆಂದು ಅವರು ತಿಳಿಸಿದ್ದಾರೆ. ಧಾರವಾಡ ಜಿಲ್ಲೆಯ ಬೆಣ್ಣಿ ಹಳ್ಳ ಮತ್ತು ತುಪ್ಪರಿ ಹಳ್ಳದ ಅಚ್ಚು- ಕಟ್ಟು ಪ್ರದೇಶದಲ್ಲಿ ನಿನ್ನೆ ರಾತ್ರಿ ವ್ಯಾಪಕ ಮಳೆಯಾಗಿದ್ದರಿಂದ, ಎರಡು ಹಳ್ಳದ ಹರಿವಿನಲ್ಲಿ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದರಿಂದ ಪ್ರವಾಹ ಪರಿಸ್ಥತಿ ಉಂಟಾಗಬಹುದು. ಹವಾಮಾನ ಇಲಾಖೆಯ ವರದಿಯಂತೆ ಮುಂದಿನ 3 ದಿನ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆ ಹಾಗೂ ಬೆಣ್ಣಿ ಹಳ್ಳ ಮತ್ತು ತುಪ್ಪರಿ ಹಳ್ಳದ ಅಚ್ಚು-ಕಟ್ಟು ಪ್ರದೇಶದಲ್ಲಿ ಎಚ್ಚರಿಕೆ ವಹಿಸಲು ಅಧಿಕಾರಿಗ ಳು ಸಾರ್ವಜನಿಕರಿಗೆ ಸೂಚಿಸಿದ್ದಾರೆ.
ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿ ( ಪಿ.ಯು.ಸಿ ಬೊರ್ಡ್)ಯ ವೇಳಾಪಟ್ಟಿಯಂತೆ ಈಗಾಗಲೇ ಇಂದು ನಿಗದಿ ಆಗಿರುವ ಪಿ.ಯು.ಸಿ ವಾರ್ಷಿಕ ಪರೀಕ್ಷೆ-3 ಅನ್ನು ಜರುಗಿಸಲಾಗುತ್ತದೆ. ಈ ಪರೀಕ್ಷೆಯು ಹುಬ್ಬಳ್ಳಿಯ ಮೂರು, ಧಾರವಾಡದ ಮೂರು ಹಾಗೂ ಕುಂದಗೋಳ, ಕಲಘಟಗಿ ಮತ್ತು ಅಣ್ಣಿಗೇರಿ ಪಟ್ಟಣದ ತಲಾ ಒಂದು ಕೇಂದ್ರ ಸೇರಿ ಒಟ್ಟು ಒಂಬತ್ತು ಕೇಂದ್ರಗಳಲ್ಲಿ ಯಥಾ ಪ್ರಕಾರ ಪರೀಕ್ಷೆ ನಡೆಯಲಿದ್ದು, ಸಂಭಂದಿಸಿದ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗಳು ನಿಯಮಾನುಸಾರ ಕರ್ತವ್ಯ ನಿರ್ವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಎಲ್ಲಾ ಇಲಾಖೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇದ್ದು, ಮಳೆ, ಪ್ರವಾಹದಿಂದ ಸಾರ್ವಜನಿಕರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಮತ್ತು ಈ ಕುರಿತು ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ನೀಡಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹುಬ್ಬಳ್ಳಿ ಧಾರವಾಡದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಜನರ ಸುರಕ್ಷತೆಗಾಗಿ ಹಲವು ಮುನ್ನೆಚ್ಚರಿಕಾ ಕ್ರಮಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅನವಶ್ಯಕವಾಗಿ ಮನೆಯಿಂದ ಹೊರಹೋಗದಂತೆ ಮನವಿ ಮಾಡಿಕೊಂಡಿರುವ ಮಹಾನಗರ ಪಾಲಿಕೆ ರಸ್ತೆಯಲ್ಲಿ ಓಡಾಡುವಾಗ ಫ್ಲೆಕ್ಸ್ಗಳು ಮತ್ತು ಮರಗಳ ಕೆಳಗೆ ಆಶ್ರಯ ಪಡೆಯದಂತೆ ಸೂಚನೆ ನೀಡಿದೆ. ಅದೇ ರೀತಿ ಮಳೆಯ ವೇಳೆ ಮನೆಯಲ್ಲಿ ಟಿ.ವಿ ಹಾಗೂ ಮೊಬೈಲ್ ಫೋನ್ಗಳನ್ನು ಆಫ್ ಮಾಡುವಂತೆ ಮನವಿ ಮಾಡಲಾಗಿದೆ.