
ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿನ ಎಲ್ಲಾ ಆಸ್ತಿಗಳನ್ನು ತೆರಿಗೆ ಜಾಲಕ್ಕೆ ಸೇರಿಸುವುದಕ್ಕಾಗಿ ಜಿ.ಐ.ಎಸ್ (ಭೌಗೋಳಿಕ ಮಾಹಿತಿ ವ್ಯವಸ್ಥೆ) 3ಡಿ ಮಾಡಲಿಂಗ್ ಸಮೀಕ್ಷೆ ಕಾರ್ಯ ಭರದಿಂದ ನಡೆದಿದೆ. ಮಹಾನಗರ ಪಾಲಿಕೆ ₹24 ಕೋಟಿ ವೆಚ್ಚದಲ್ಲಿ ಖಾಸಗಿ ಸಂಸ್ಥೆಯಿಂದ ಈ ಸರ್ವೇ ಮಾಡಿಸುತ್ತಿದೆ. ನಗರದ ಸಮಗ್ರ ಜಿ.ಐ.ಎಸ್ ಸಮೀಕ್ಷೆ ನಡೆಯುತ್ತಿರುವುದು ದೇಶದಲ್ಲೇ ಪ್ರಥಮ ನಗರ ಹುಬ್ಬಳ್ಳಿ-ಧಾರವಾಡ ಆಗಲಿದೆ.

j3tvkannada
ರಾಜ್ಯದ ಎರಡನೆಯ ದೊಡ್ಡ ನಗರ ಎಂಬ ಖ್ಯಾತಿ ಹುಬ್ಬಳ್ಳಿ-ಧಾರವಾಡಕ್ಕಿದೆ. ಆದರೆ, ತೆರಿಗೆ ಸಂಗ್ರಹದಲ್ಲಿ ಮಾತ್ರ ಯಾವಾಗಲೂ ಹಿಂದೆಯೇ. ಇದಕ್ಕೆ ಮೂಲ ಕಾರಣ ತೆರಿಗೆ ವ್ಯಾಪ್ತಿಯಲ್ಲಿ ಎಲ್ಲಾ ಆಸ್ತಿಗಳು ಬಾರದಿರುವುದು. ಅಂದಾಜಿನ ಪ್ರಕಾರ ಮಹಾನಗರ ಪಾಲಿಕೆಯ ವ್ಯಾಪ್ತಿಗೆ 3.38 ಲಕ್ಷ ಆಸ್ತಿಗಳು ಬರುತ್ತವೆ. ಕಳೆದ ವರ್ಷ ₹130 ಕೋಟಿ ತೆರಿಗೆ ಸಂಗ್ರಹವಾಗಿತ್ತು. ಹಾಗೆ ನೋಡಿದರೆ ಆಸ್ತಿಗಳ ಸಂಖ್ಯೆ ವಿಪರೀತವಾಗಿದೆ. ಅವುಗಳನ್ನು ತೆರಿಗೆ ವ್ಯಾಪ್ತಿಯಲ್ಲಿ ಸೇರಿಸುವುದಕ್ಕಾಗಿ ಇದೀಗ ಮಹಾನಗರ ಪಾಲಿಕೆ ಜಿ.ಐ.ಎಸ್ ಸಮೀಕ್ಷೆಗೆ ಮೊರೆ ಹೋಗಿದೆ. ಜಿ.ಐ.ಎಸ್ ಸಮೀಕ್ಷೆ ಎಂದರೆ ಭೌಗೋಳಿಕವಾಗಿ ಸಮಗ್ರ ಮಾಹಿತಿ ಸಂಗ್ರಹಿಸಿ ಇಡುವ ವ್ಯವಸ್ಥೆ. ₹24 ಕೋಟಿ ವೆಚ್ಚದಲ್ಲಿ ನಡೆಸಲಾಗುತ್ತಿದೆ. ಮುಂಬೈ ಮೂಲದ ಜೆನೆಸಿಸ್ ಇಂಟರ್ನ್ಯಾಷನಲ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆ ಈ ಸಮೀಕ್ಷೆಯ ಜವಾಬ್ದಾರಿ ಹೊತ್ತಿದೆ.
ಈಗಾಗಲೇ ವೈಮಾನಿಕ ಸಮೀಕ್ಷೆ ಪೂರ್ಣಗೊಂಡಿದೆ. ಬರೋಬ್ಬರಿ 10 ದಿನಗಳ ಕಾಲ ವೈಮಾನಿಕ ಸಮೀಕ್ಷೆ ನಡೆಸಲಾಗಿದೆ. ಇದೀಗ ಅದರ ಡೇಟಾ ಪ್ರೋಸೆಸಿಂಗ್ ಕೆಲಸ ನಡೆದಿದೆ. ಇನ್ನು, ಆನ್ ರೋಡ್ ಸಮೀಕ್ಷೆ ನಡೆಯುತ್ತಿದೆ. ಸ್ಕಾರ್ಫಿಯೋ ವಾಹನ ಹಾಗೂ ದ್ವಿಚಕ್ರ ವಾಹನದ ಮೂಲಕ ಸಮೀಕ್ಷೆ ನಡೆಯುತ್ತಿದೆ. ಸ್ಕಾರ್ಫಿಯೋ ವಾಹನ ತೆರಳದ ಜಾಗದಲ್ಲಿ ದ್ವಿಚಕ್ರ ವಾಹನದಲ್ಲಿ ಸಂದಿಗೊಂದಿಗಳಲ್ಲಿ ತೆರಳಿ ಕ್ಯಾಮರಾದ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ. ಈವರೆಗೆ 700 ಕಿ.ಮೀ. ಸಮೀಕ್ಷೆ ನಡೆಸಲಾಗಿದ್ದು, ಇನ್ನೂ 2,500 ಕಿ.ಮೀ. ಸಮೀಕ್ಷೆ ನಡೆಸುವುದು ಬಾಕಿ ಉಳಿದಿದೆ. ಆನ್ ರೋಡ್ ಸಮೀಕ್ಷೆ ಪೂರ್ಣಗೊಳ್ಳಲು ಒಂದೂವರೆ ತಿಂಗಳು ಬೇಕಾಗುತ್ತದೆ.
ತೆರಿಗೆ ವ್ಯಾಪ್ತಿಯಲ್ಲಿ ಎಲ್ಲ ಆಸ್ತಿಗಳು ಇಲ್ಲದಿರುವುದರಿಂದ ಅವುಗಳ ತೆರಿಗೆ ಪಾವತಿಸಲು ಆಗುತ್ತಿಲ್ಲ. ವಸೂಲಿ ಮಾಡುವುದು ಕಷ್ಟಕರವಾಗುತ್ತದೆ. ಎಲ್ಲಾ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬಂದರೆ ₹400 ಕೋಟಿವರೆಗೂ ತೆರಿಗೆ ಸಂಗ್ರಹವಾಗುತ್ತದೆ ಎಂದು ಅಂದಾಜಿಸಲಾಗುತ್ತಿದೆ. ಪಾಲಿಕೆ ತೆರಿಗೆ ಸಂಗ್ರಹ ಎರಡೂವರೆ ಪಟ್ಟು ಹೆಚ್ಚಾಗುತ್ತದೆ. ಹಾಗೆ ನೋಡಿದರೆ ದೇಶದ ವಿವಿಧೆಡೆ ಅಲ್ಲಲ್ಲಿ ಜಿ.ಐ.ಎಸ್ ಸಮೀಕ್ಷೆ ನಡೆಸಲಾಗಿದೆ. ಆದರೆ ಅವೆಲ್ಲವೂ ಅಲ್ಪ ಸ್ವಲ್ಪ ನಡೆಸಿದ ಜಿ.ಐ.ಎಸ್ ಸಮೀಕ್ಷೆಯಾಗಿವೆ. ಸಮಗ್ರ ನಗರವನ್ನು ಜಿ.ಐ.ಎಸ್ ಮೂಲಕ ಸಮೀಕ್ಷೆ ನಡೆಸುತ್ತಿರುವುದು ದೇಶದಲ್ಲೇ ಮೊದಲು. ಹೀಗಾಗಿ ಸಮೀಕ್ಷೆ ಮುಗಿದರೆ ಕೇಂದ್ರ ಸರ್ಕಾರದಿಂದ ₹30 ಕೋಟಿ ಇನ್ಸೆಂಟಿವ್ ಕೂಡ ಪಾಲಿಕೆಗೆ ಬರಲಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಜಿ.ಐ.ಎಸ್ ಸಮೀಕ್ಷೆ ನಡೆಯುತ್ತಿದೆ. ಈಗಾಗಲೇ ವೈಮಾನಿಕ ಸಮೀಕ್ಷೆ ಪೂರ್ಣಗೊಂಡಿದೆ. ಆನ್ ರೋಡ್ ಸಮೀಕ್ಷೆ ನಡೆಯುತ್ತಿದೆ. ಸಮೀಕ್ಷೆ ಪೂರ್ಣಗೊಳ್ಳಲು 15 ತಿಂಗಳು ಬೇಕಾಗುತ್ತದೆ. ಸಮಗ್ರ ಮಹಾನಗರದ ಜಿಐಎಸ್ ಸಮೀಕ್ಷೆ ನಡೆಸುತ್ತಿರುವುದು ದೇಶದಲ್ಲಿ ಮೊದಲು. ಹೀಗಾಗಿ, ಕೇಂದ್ರದಿಂದ ₹30 ಕೋಟಿ ಇನ್ಸೆಂಟಿವ್ ಬರಲಿದೆ.