
ಚಾಮರಾಜನಗರ: ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಬೇಡಗುಳಿ ಸಮೀಪದ ರಾಮಯ್ಯನ ಪೋಡಿ ಎಂಬಲ್ಲಿ ಹುಲಿಯೊಂದು ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.

j3tvkannada
ಚಾಮರಾಜನಗರ ತಾಲೂಕಿನ ಪುಣಜನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಡಗುಳಿಯ ರಾಮಯ್ಯನ ಪೋಡಿಯಲ್ಲಿ ರವಿ(34) ಎಂಬವರ ಮೇಲೆ ಹುಲಿ ದಾಳಿ ನಡೆಸಿದೆ. ಇದರಿಂದ ರವಿಯವರ ತಲೆ, ಕೈ ಹಾಗೂ ಕಾಲುಗಳಿಗೆ ತೀವ್ರ ಗಾಯಗಳಾಗಿವೆ.
ವಿಷಯ ತಿಳಿದ ಅರಣ್ಯ ಇಲಾಖೆಯ ಚಾಮರಾಜನಗರ ವೃತ್ತ ಅರಣ್ಯಾಧಿಕಾರಿ ಹಿರಲಾಲ್, ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ ಸ್ಥಳಕ್ಕೆ ಆಗಮಿಸಿ ರವಿಯನ್ನು ಚಾಮರಾಜನಗರ ಸರಕಾರಿ ಭೋದನಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ಚೇತರಿಸಿಕೊಳ್ಳುತ್ತಿದ್ದಾರೆ.
ಸದ್ಯ ಹುಲಿ ದಾಳಿಯ ಸ್ಥಳದ ಸುತ್ತ ಮುತ್ತಲು ಸಾರ್ವಜನಿಕರು ತಿರುಗಾಡುವುದನ್ನು ನಿಷೇಧಿಸಲಾಗಿದೆ. ಇಲ್ಲಿ ವಾಸ ಮಾಡುವ ಕುಟುಂಬಗಳಿಗೆ ದಾಳಿ ಮಾಡಿದ ಹುಲಿ ಸೆರೆಯಾಗುವ ತನಕ ತಾತ್ಕಾಲಿಕವಾಗಿ ಆಶ್ರಮ ಶಾಲೆಯಲ್ಲಿ ಆಶ್ರಯ ನೀಡುವಂತೆ ನಿವಾಸಿಗಳು ಮನವಿ ಮಾಡಿದ್ದಾರೆ.
ಹುಲಿ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆಯನ್ನು ಆರಂಭಿಸಿದೆ. ಹುಲಿ ದಾಳಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರವಿಯವರನ್ನು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಎಚ್.ಎಸ್. ಬಿಂದ್ಯಾ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.