
ರಾಯಚೂರು: ಆರ್.ಸಿ.ಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಪ್ರಕರಣದ ಹಿನ್ನೆಲೆ ನಾಳೆ ರಾಯಚೂರು ಜಿಲ್ಲೆಯಲ್ಲಿ ನಡೆಯಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.

j3tvkannada
ನಾಳೆ (ಜೂನ್.9) ನಗರದ ವಾಲ್ಕಾಟ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ವಿಭಾಗೀಯ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಪ್ರಜಾಸೌಧ ಕಟ್ಟಡದ ಅಡಿಗಲ್ಲು ಹಾಗೂ ಮುಂಗಾರು ಉತ್ಸವ ಸೇರಿ ವಿವಿಧ ಕಾರ್ಯಕ್ರಮಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಬೇಕಿತ್ತು. ಆದರೆ ಚಿನ್ನಸ್ವಾಮಿಯಲ್ಲಿ ನಡೆದ ಕಾಲ್ತುಳಿತ ಪ್ರಕರಣದ ಹಿನ್ನೆಲೆ ಕಾರ್ಯಕ್ರಮದ ಸಿದ್ಧತೆಗಳನ್ನು ಆರಂಭದಲ್ಲೇ ಮೊಟಕುಗೊಳಿಸಲಾಗಿದೆ.
ಏನಿದು ಪ್ರಕರಣ:-
ರಾಯಲ್ ಚಾಲೆಂಜರ್ಸ್ ಬೆಂಗಳೂರು 18 ವರ್ಷಗಳ ಬಳಿಕ ಐ.ಪಿ.ಎಲ್ ಚಾಂಪಿಯನ್ ಪಟ್ಟವನ್ನೇನೋ ಅಲಂಕರಿಸಿದೆ. ಪಂಜಾಬ್ ವಿರುದ್ಧ ಬೆಂಗಳೂರು 6 ರನ್ಗಳ ಭರ್ಜರಿ ಜಯ ಸಾಧಿಸ್ತಿದ್ದಂತೆಯೇ ಸಿಲಿಕಾನ್ ಸಿಟಿಯಲ್ಲಿ ಮಂಗಳವಾರ (ಜೂ.3) ರಾತ್ರಿಯೇ ದೀಪಾವಳಿಯಂತಹ ಸಂಭ್ರಮ ಇತ್ತು. ಬುಧವಾರ (ಜೂ.4) ಇಡೀ ದಿನ ಹೆಚ್.ಎ.ಎಲ್ ಏರ್ಪೋರ್ಟ್ ರೋಡ್, ತಾಜ್ ವೆಸ್ಟ್ ಎಂಡ್ ಹೊಟೇಲ್ ರೋಡ್, ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆ ಸುತ್ತ ಮುತ್ತ ರೆಡ್ ಆರ್ಮಿ ಎಲ್ಲಾ ಕಡೆ ಆರ್.ಸಿ.ಬಿ ತಂಡಕ್ಕೆ ತಮ್ಮ ಅಭಿಮಾನ ತೋರಿದರು.
ಅದೇ ದಿನ ದಿಢೀರನೇ ಆರ್.ಸಿ.ಬಿ ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಿತ್ತು. ಉಚಿತ ಪ್ರವೇಶ ಆಗಿದ್ದರಿಂದ ಕ್ರೀಡಾಂಗಣಕ್ಕೆ ಅಭಿಮಾನಿ ಸಾಗರವೇ ಹರಿದು ಬಂದಿತ್ತು. ಗೇಟ್ ನಂಬರ್ 18, 19, 20 ರ ಬಳಿ ಅಭಿಮಾನಿಗಳನ್ನು ತಡೆಯಲು ಪೊಲೀಸರು ಹೈರಾಣಾಗಿ ಹೋಗಿದ್ದರು. ಒಂದು ಹಂತದಲ್ಲಿ ಲಾಠಿಯನ್ನೂ ಬೀಸಿದರು. ಕ್ಷಣ ಕ್ಷಣಕ್ಕೂ ಆರ್.ಸಿ.ಬಿ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ಆದರೆ, ಗೇಟ್ ನಂ.12 ರ ಬಳಿ ಗೇಟ್ ತೆಗೆಯುತ್ತಿದ್ದಂತೆಯೇ ಭಾರೀ ಪ್ರಮಾಣದಲ್ಲಿ ನೂಕು ನುಗ್ಗಲು ಉಂಟಾಯಿತು. ಒಬ್ಬರ ಮೇಲೋಬ್ಬರು ಬಿದ್ದು, ಉಸಿರಾಟದ ಸಮಸ್ಯೆ ಉಂಟಾಗಿ ಒಟ್ಟು 11 ಜನ ಸಾವನ್ನಪ್ಪಿದ್ದರು.