
ಬೆಂಗಳೂರು: ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರನ್ನು ಅಮಾನತುಗೊಳಿಸಿದ್ದ ಸರ್ಕಾರದ ಆದೇಶದ ವಿರುದ್ಧ ಮಡಿವಾಳ ಠಾಣೆಯ ಹೆಡ್ ಕಾನ್ಸ್ಟೇಬಲ್ ಒಬ್ಬರು ರಾಜಭವನಕ್ಕೆ ತೆರಳಿ ಅಂಬೇಡ್ಕರ್ ಫೋಟೋ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

j3tvkannada
ಹೆಡ್ ಕಾನ್ಸ್ಟೇಬಲ್ ನರಸಿಂಹರಾಜು ಅವರು ಸರ್ಕಾರದ ನಡೆ ಖಂಡಿಸಿ ರಾಜ್ಯಪಾಲರಿಗೆ ದೂರು ನೀಡಲು ತೆರಳಿದ್ದರು. ಈ ವೇಳೆ ಅಂಬೇಡ್ಕರ್ ಫೋಟೋ ಹಿಡಿದು, ಕಪ್ಪುಪಟ್ಟಿ ಧರಿಸಿ ರಾಜಭವನದ ಎದುರು ಅವರು ಪ್ರತಿಭಟನೆ ನಡೆಸಿದ್ದಾರೆ. ದೂರಿನಲ್ಲಿ ಪೊಲೀಸ್ ಅಧಿಕಾರಿಗಳ ಅಮಾನತು ಆದೇಶ ರದ್ದು ಪಡಿಸಬೇಕು. ಈ ಮೂಲಕ ಪೊಲೀಸ್ ಇಲಾಖೆಗೆ ನೈತಿಕ ಸ್ಥೈರ್ಯ ತುಂಬಬೇಕು ಎಂದು ಬರೆದಿದ್ದಾರೆ. ಅವರನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬುಧವಾರ ಆರ್ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತಕ್ಕೆ 11 ಮಂದಿ ಅಭಿಮಾನಿಗಳು ಸಾವನ್ನಪ್ಪಿದ್ದರು. ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ವಿಧಾನಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಾಗರೋಪಾದಿಯಲ್ಲಿ ಜನ ನೆರೆದಿದ್ದರು. ಜನರಲ್ಲಿ ನೂಕು ನುಗ್ಗಲಿಂದ ಕಾಲ್ತುಳಿತ ಉಂಟಾಗಿ ಈ ದುರಂತ ಸಂಭವಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್ ಕಮಿಷನರ್ ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಸರ್ಕಾರ ಗುರುವಾರ ಆದೇಶ ಹೊರಡಿಸಿತ್ತು. ಪೊಲೀಸ್ ಕಮಿಷನರ್ ಬಿ.ದಯಾನಂದ್, ಅಡಿಷನಲ್ ಕಮಿಷನರ್ ವಿಕಾಸ್ ಕುಮಾರ್, ಸೆಂಟ್ರಲ್ ಡಿ.ಸಿ.ಪಿ ಶೇಖರ್ ತೆಕ್ಕಣ್ಣನವರ್, ಎ.ಸಿ.ಪಿ ಬಾಲಕೃಷ್ಣ, ಇನ್ಸ್ಪೆಕ್ಟರ್ ಗಿರೀಶ್ ಅವರನ್ನು ಅಮಾನತು ಮಾಡಲಾಗಿತ್ತು.