

j3tvkannada
ಹಾಸನ: ಐ.ಪಿ.ಎಲ್ ನಲ್ಲಿ ಆರ್. ಸಿ.ಬಿ ಜಯ ಗಳಿಸಿದ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತಲ್ಲಿ ಸಿಲುಕಿ ಮೃತಪಟ್ಟ ಭೂಮಿಕ್ ಅಂತ್ಯಕ್ರಿಯೆ ಇಂದು ಆತನ ಹುಟ್ಟೂರಾದ ಬೇಲೂರು ತಾಲೂಕಿನ ಕುಪ್ಪುಗೋಡು ಗ್ರಾಮದಲ್ಲಿ ನಡೆಯಿತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಭೂಮಿಕ್ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಮೃತ ದೇಹವನ್ನು ಹಸ್ತಾಂತರಿಸಲಾಗಿದ್ದು, ಮೃತ ದೇಹವನ್ನು ತಂದು ಇಂದು ಮಧ್ಯಾಹ್ನದ ವೇಳೆ ಅಂತ್ಯಕ್ರಿಯೆ ನಡೆಸಲಾಗಿದೆ.
ಭೂಮಿಕ್ ಡಿ.ಟಿ.ಲಕ್ಷ್ಮಣ-ಅಶ್ವಿನಿ ದಂಪತಿಯ ಏಕೈಕ ಪುತ್ರ. ಕಳೆದ ಇಪ್ಪತ್ತು ವರ್ಷಗಳಿಂದ ಲಕ್ಷ್ಮಣ ಕುಟುಂಬಸ್ಥರು ಬೆಂಗಳೂರಿನಲ್ಲಿ ನೆಲೆಸಿ ಸಣ್ಣ ಕೈಗಾರಿಕೆ ನಡೆಸುತ್ತಿದ್ದಾರೆ. ಭೂಮಿಕ್ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದು ಮೊನ್ನೆ ಕೂಡ ಕಾಲೇಜಿಗೆ ತೆರಳಿದ್ದರು. ನಂತರ ಸ್ನೇಹಿತರ ಜೊತೆ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿದ್ದು ಕಾಲ್ತುಳಿತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾನೆ.