
ಬೆಂಗಳೂರು: ಮಹಾನಗರ ಸಾರಿಗೆ ಸಂಸ್ಥೆ (ಬಿ.ಎಂ.ಟಿ.ಸಿ) ವಿದ್ಯಾರ್ಥಿಗಳಿಗೆ ನೀಡುವ ಉಚಿತ ಅಥವಾ ರಿಯಾಯಿತಿ ದರದ ಪಾಸ್ಗಳಿಗೆ ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಮೇ 26ರಿಂದಲೇ ಆನ್ಲೈನ್ ಮೂಲಕ ಅರ್ಜಿ ಸ್ವೀಕರಿಸಲಾಗುತ್ತಿದ್ದು, ಜೂನ್ 1ರಿಂದ ಬೆಂಗಳೂರು ಒನ್ ಕೇಂದ್ರಗಳ ಮೂಲಕ ಸ್ಮಾರ್ಟ್ ಕಾರ್ಡ್ ಮಾದರಿಯ ಪಾಸ್ಗಳನ್ನು ವಿತರಣೆ ಶುರುವಾಗಲಿದೆ.

j3tvkannada
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ನಿರ್ದೇಶನದಂತೆ ಉಚಿತ, ರಿಯಾಯಿತಿ ದರದಲ್ಲಿ ವಿದ್ಯಾರ್ಥಿ ರಿಯಾಯಿತಿ ಪಾಸುಗಳನ್ನು ವಿತರಣೆ ಮಾಡುತ್ತಿದೆ.
ಪ್ರಸ್ತುತ ಶಾಲಾ ವಿದ್ಯಾರ್ಥಿಗಳು, ಪಿ.ಯು.ಸಿ, ಪದವಿ, ಸ್ನಾತಕೋತ್ತರ ಪದವಿ, ವೃತಿಪರ, ತಾಂತ್ರಿಕ, ವೈದ್ಯಕೀಯ, ಸಂಜೆ ಕಾಲೇಜು, ಪಿ.ಎಚ್.ಡಿ ವಿದ್ಯಾರ್ಥಿಗಳ ಪಾಸುಗಳನ್ನು ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪ ಸಂಖ್ಯಾತರಿಗೆ ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ ಕರ್ನಾಟಕ ರಾಜ್ಯದ ವಿದ್ಯಾರ್ಥಿನಿಯರು ಬಸ್ ಪಾಸು ಪಡೆಯುವ ಅಗತ್ಯವಿಲ್ಲ. ಆದರೆ, ಇದು ಕರ್ನಾಟಕದ ನಿವಾಸಿಗಳಿಗೆ ಮಾತ್ರ ಅನ್ವಯಿಸುತ್ತದೆ.
2025-26 ನೇ ಸಾಲಿನ ವಿದ್ಯಾರ್ಥಿಗಳು ರಿಯಾಯಿತಿ ಪಾಸಿನ ಆನ್ಲೈನ್ ಅರ್ಜಿಯು ಬಿ.ಎಂ.ಟಿ.ಸಿ ವೆಬ್ಸೈಟ್, ಬೆಂಗಳೂರು ಒನ್ ಕೌಂಟರ್ ಹಾಗೂ ಸೇವಾ ಸಿಂಧು ಪೋರ್ಟಲ್ (https://sevasindhuservices.karnataka.gov.in/buspassservices/loginWindow.do)ಗಳಲ್ಲಿ ಲಭ್ಯವಿದೆ. ಇದಲ್ಲದೆ 2025-26ನೇ ಸಾಲಿನಲ್ಲಿ ವಿದ್ಯಾರ್ಥಿ ರಿಯಾಯಿತಿ ಪಾಸುಗಳ ವಿತರಣೆಗೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸಲು ಕಾಲೇಜಿನಿಂದ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲು ಶಾಲೆ ಮತ್ತು ಕಾಲೇಜುಗಳಿಗೆ ಬಿ.ಎಂ.ಟಿ.ಸಿಯು ಮನವಿ ಮಾಡಿದೆ. ಈ ಸಂಬಂಧ ನಮೂನೆಯೊಂದನ್ನು ಬಿಡುಗಡೆ ಮಾಡಿದ್ದು, ಇದನ್ನು ಶಾಲೆ ಅಥವಾ ಕಾಲೇಜಿನ ನೋಟಿಸ್ ಬೋರ್ಡ್ನಲ್ಲಿ ಪ್ರಕಟಿಸಲು ಕೋರಿದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:-
ಅರ್ಜಿ ಸಲ್ಲಿಸಲು ಪಾಸ್ಪೋರ್ಟ್ ಗಾತ್ರದ ಫೋಟೋ, ಹೆಸರು, ಎಸ್.ಎ.ಟಿ.ಎಸ್ (ಶಾಲೆಯ ರಿಜಿಸ್ಟ್ರೇಷನ್) ಸಂಖ್ಯೆ, ಹುಟ್ಟಿದ ದಿನಾಂಕ, ವಿಳಾಸ, ತಂದೆ ಮತ್ತು ತಾಯಿ ಹೆಸರು, ದೂರವಾಣಿ, ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದರೆ ಅದರ ವಿಳಾಸ, ಶಿಕ್ಷಣ ಸಂಸ್ಥೆ ಹಾಸ್ಟೆಲ್ ಆದರೆ ತರಗತಿ ಮತ್ತು ಶಿಕ್ಷಣ ಸಂಸ್ಥೆ ಹೆಸರು, ಹೆತ್ತವರ ಸಹಿ ಹಾಗೂ ವಿದ್ಯಾ ಸಂಸ್ಥೆಯ ದೃಢೀಕರಣ ಬೇಕಾಗುತ್ತದೆ.
ಅರ್ಜಿ ಸಲ್ಲಿಕೆಯ ವಿಧಾನ:-
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅರ್ಜಿದಾರರು ಮೊದಲು ತಮ್ಮ ಆಧಾರ್ ವಿವರಗಳನ್ನು ಬಳಸಿಕೊಂಡು ಸೇವಾಸಿಂಧು ವೆಬ್ಸೈಟ್ನಲ್ಲಿ ನೋಂದಾಯಿಸಿಕೊಳ್ಳಬೇಕು.
- ನೋಂದಣಿ ನಂತರ ವಿಶಿಷ್ಟ ಬಳಕೆದಾರರ ಹೆಸರು ಮತ್ತು ಪಾಸ್ವರ್ಡ್ ಲಭ್ಯವಾಗಲಿದೆ. ಈ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಮೂಲಕ ಪಾಸಿಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
- ವಿದ್ಯಾರ್ಥಿಗಳು ಆನ್ಲೈನ್ ಅರ್ಜಿಯನ್ನು ಕಂಪ್ಯೂಟರ್, ಲ್ಯಾಪ್ಟಾಪ್, ಮೊಬೈಲ್ನಲ್ಲಿ ಖುದ್ದಾಗಿ ಸಲ್ಲಿಸಬಹುದು. ಇದಕ್ಕೆ ಯಾವುದೇ ಶುಲ್ಕವಿರುವುದಿಲ್ಲ.
ಒಂದು ವೇಳೆ ವಿದ್ಯಾರ್ಥಿಗಳು ಖುದ್ದಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇದ್ದಲ್ಲಿ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳ ಮೂಲಕವು ಅರ್ಜಿ ಸಲ್ಲಿಸಬಹುದು. - ಬೆಂಗಳೂರು ಒನ್ ಕೇಂದ್ರಗಳ ಸಿಬ್ಬಂದಿಗಳ ಮೂಲಕ ಅರ್ಜಿ ಸಲ್ಲಿಕೆಗೆ ಹಣ ಪಾವತಿಸಬೇಕು. ಅರ್ಜಿ ಸಲ್ಲಿಸಲು 30 ರೂ. ಸೇವಾ ಶುಲ್ಕ ನೀಡಬೇಕು.
- ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿಯನ್ನು ಶಿಕ್ಷಣ ಸಂಸ್ಥೆ ಮತ್ತು ಬಿ.ಎಂ.ಟಿ.ಸಿ ಪರಿಶೀಲಿಸಿ ಅನುಮೋದಿಸಲಿದೆ ಅಥವಾ ತಿರಸ್ಕರಿಸಲಿದೆ.
- ಪರಿಶೀಲಿಸಿ ತಿರಸ್ಕೃತಗೊಂಡ ಅರ್ಜಿಯ ವಿದ್ಯಾರ್ಥಿಗಳು ಸರಿಯಾದ ಮಾಹಿತಿಯೊಂದಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಇದೆ.
ಪಾಸ್ ಪಡೆದುಕೊಳ್ಳುವುದು ಹೇಗೆ:-
- ವೇಳಾಪಟ್ಟಿಗೆ ಅನುಸಾರವಾಗಿ ಬೆಂಗಳೂರು ಒನ್ ಕೇಂದ್ರಕ್ಕೆ ಖುದ್ದಾಗಿ ತೆರಳಿ ನಿಗದಿತ ಪಾಸಿನ ಶುಲ್ಕವನ್ನು ನಗದು, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಯು.ಪಿ.ಐ ಮೂಲಕ ಪಾವತಿಸಿ ಪಾಸನ್ನು ಪಡೆಯಬೇಕು.
- ಪಾಸ್ ಅನ್ನು ಪಡೆಯಲು ಸ್ವೀಕೃತ ಪತ್ರ, ಶಾಲಾ ಅಥವಾ ಕಾಲೇಜಿನ ಗುರುತಿನ ಚೀಟಿ, ಅಥವಾ ಶುಲ್ಕ ಪಾವತಿಸಿದ ರಸೀದಿ ಅಥವಾ ಶಾಲಾ ಮುಖ್ಯಸ್ಥರಿಂದ ದೃಢೀಕರಿಸಿದ ಪ್ರಮಾಣ ಪತ್ರವನ್ನು ನೀಡಿ ಪಾಸ್ ಪಡೆಯಬಹುದು.
- ವಿದ್ಯಾರ್ಥಿಯ ಅರ್ಜಿಯನ್ನು ಬಿ.ಎಂ.ಟಿ.ಸಿ ಅನುಮೋದಿಸಿದಲ್ಲಿ ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ನಲ್ಲಿ ವೇಳಾಪಟ್ಟಿಗೆ ಹೋಗಿ ಪಾಸು ಪಡೆಯುವ ಬೆಂಗಳೂರು ಒನ್ ಕೇಂದ್ರ, ದಿನಾಂಕ ಹಾಗೂ ಸಮಯವನ್ನು ನಿಗದಿಪಡಿಸಿಕೊಳ್ಳಬೇಕು.
- ವಿದ್ಯಾರ್ಥಿ ಪಾಸುಗಳನ್ನು ಬೆಳಿಗ್ಗೆ 8 ಗಂಟೆಯಿಂದ ಸಂಜೆ 6:30ರವರೆಗೆ ಎಲ್ಲಾ ದಿನಗಳಲ್ಲಿ ಬೆಂಗಳೂರು ಒನ್ ಕೇಂದ್ರಗಳಲ್ಲಿ ವಿತರಿಸಲಾಗುತ್ತದೆ.
ಇದಲ್ಲದೆ ಬಿಎಂಟಿಸಿಯ ಕೆಂಪೇಗೌಡ ಬಸ್ ನಿಲ್ದಾಣ ಮೆಜೆಸ್ಟಿಕ್, ಕೆಂಗೇರಿ , ಹೊಸಕೋಟೆ ಬಿ.ಎಂ.ಟಿ.ಸಿ ಬಸ್ ನಿಲ್ದಾಣ, ಎಲೆಕ್ಟ್ರಾನಿಕ್ ಸಿಟಿ ಬಿ.ಎಂ.ಟಿ.ಸಿ ಡಿಪೋ, ಶಾಂತಿನಗರ ಹಾಗೂ ಕ.ರಾ.ರ.ಸಾ ನಿಗಮದ ಆನೇಕಲ್ ಬಸ್ ನಿಲ್ದಾಣಗಳಲ್ಲಿ ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.