
ಮಂಡ್ಯ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಾಲ್ಕೇ ದಿನದಲ್ಲಿ ಕೆ.ಆರ್.ಎಸ್ ಜಲಾಶಯದಲ್ಲಿ 11 ಅಡಿ ನೀರು ಹೆಚ್ಚಳವಾಗಿದೆ. ಹಲವು ವರ್ಷಗಳ ಬಳಿಕ ಮೇ ತಿಂಗಳಲ್ಲೇ 100 ಅಡಿ ಭರ್ತಿಯಾದಂತಾಗಿದೆ.

j3tvkannada
ಹಳೆ ಮೈಸೂರು ಭಾಗದ ಜೀವನಾಡಿಯಾದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಅಣೆಕಟ್ಟೆಗೆ ಉತ್ತಮ ಒಳ ಹರಿವು ಇದ್ದು, ನಾಲ್ಕೇ ದಿನದಲ್ಲಿ 11 ಅಡಿ ಭರ್ತಿಯಾಗಿದೆ. ಇದೇ ರೀತಿ ಮಳೆ ಮುಂದುವರಿದರೆ ಜೂನ್ ಎರಡನೇ ವಾರದಲ್ಲಿ ಡ್ಯಾಂ ಭರ್ತಿಯಾಗುವ ಸಾಧ್ಯತೆಯಿದೆ.
ಮುಂಗಾರು ಆರಂಭದಲ್ಲಿಯೇ ಉತ್ತಮ ಮಳೆಯಾಗುತ್ತಿರುವುದು ರೈತರ ಮುಖದಲ್ಲಿ ಮಂದಹಾಸ ತಂದಿದೆ. ಹಲವು ವರ್ಷಗಳ ಬಳಿಕ ಮೇ ತಿಂಗಳಿನಲ್ಲಿ ಈ ಮಟ್ಟದ ಒಳ ಹರಿವು ಇದೆ. ಕಳೆದ ನಾಲ್ಕು ದಿನದ ಹಿಂದೆ ನೀರಿನ ಮಟ್ಟ 89 ಅಡಿಗೆ ಕುಸಿದಿತ್ತು. ಇದರಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತದೆ ಎಂದು ಅಲ್ಲಿನ ಜನರು ಆತಂಕಕ್ಕೊಳಗಾಗಿದ್ದರು.
124.80 ಅಡಿ ಗರಿಷ್ಠ ಮಟ್ಟ ಸಂಗ್ರಹ ಸಾಮರ್ಥ್ಯ ಹೊಂದಿರುವ ಕೆ.ಆರ್.ಎಸ್ನಲ್ಲಿ 100.10 ಅಡಿ ನೀರಿದೆ. 49.452 ಟಿ.ಎಂ.ಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು ಸದ್ಯ 22.222 ಟಿ.ಎಂ.ಸಿ ನೀರು ಸಂಗ್ರಹವಾಗಿದೆ. ಸದ್ಯ ಒಳ ಹರಿವಿನ ಪ್ರಮಾಣ 19,448 ಕ್ಯೂಸೆಕ್ ಇದ್ದು, 670 ಕ್ಯೂಸೆಕ್ ಹೊರ ಹರಿವಿದೆ.