
ಬೆಂಗಳೂರು: ಮಹಾನಗರದಲ್ಲಿ ಹೆಚ್ಚುತ್ತಿರುವ ಧೂಮಪಾನಕ್ಕೆ ಕಡಿವಾಣ ಹಾಕುವ ಸಲುವಾಗಿ ಬಿ.ಬಿ.ಎಂ.ಪಿಯು, ತಂಬಾಕು ಮಾರಾಟಕ್ಕೆ ಪ್ರತ್ಯೇಕ ಟ್ರೇಡ್ ಲೈಸೆನ್ಸ್ ಪಡೆಯುವುದನ್ನು ಕಡ್ಡಾಯಗೊಳಿಸಲು ಮುಂದಾಗಿದೆ. ಕಳೆದ ವರ್ಷವೇ ಈ ಕುರಿತ ನಿಯಮಗಳನ್ನು ಪ್ರಕಟಿಸಿದ್ದರೂ ಪಾಲಿಕೆಯ ಆನ್ಲೈನ್ ವ್ಯವಸ್ಥೆಯಲ್ಲಿಅದನ್ನು ಸೇರ್ಪಡೆ ಮಾಡುವುದು ವಿಳಂಬವಾಗಿತ್ತು.

j3tvkannada
ಇದೀಗ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಉದ್ದಿಮೆ ಪರವಾನಗಿ ನಿಯಮ ಸದ್ಯದಲ್ಲೇ ಜಾರಿಗೆ ಬರಲಿದೆ. ಹೊಸ ಪದ್ಧತಿ ಜಾರಿ ಬಳಿಕ ಅಂಗಡಿ-ಮುಂಗಟ್ಟುಗಳಲ್ಲಿ ಬೀಡಿ, ಸಿಗರೇಟು, ಗುಟ್ಕಾ ಸೇರಿದಂತೆ ಯಾವುದೇ ತುಂಬಾಕು ಪದಾರ್ಥಗಳನ್ನು ಮಾರಾಟ ಮಾಡಬೇಕಾದರೂ ಸಾಮಾನ್ಯ ಟ್ರೇಡ್ ಲೈಸೆನ್ಸ್ ಜತೆಗೆ ತಂಬಾಕು ವ್ಯಾಪಾರ ಪರವಾನಗಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕಿದೆ. ಇಲ್ಲವಾದಲ್ಲಿ ದಂಡ ತೆರಬೇಕಾಗುತ್ತದೆ. ಪರವಾನಗಿ ಶುಲ್ಕವನ್ನು ಐದು ವರ್ಷಗಳಿಗೆ 500 ರೂ. ನಿಗದಿಪಡಿಸಲಾಗಿದೆ.
ಒಂದು ವೇಳೆ ಲೈಸೆನ್ಸ್ ಇಲ್ಲದೆ ಬೀಡಿ, ಸಿಗರೇಟ್, ಗುಟ್ಕಾ ಮತ್ತಿತರ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡಿದರೆ ಮೊದಲ ಬಾರಿಗೆ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ನಂತರದಲ್ಲಿ ಪ್ರತಿದಿನ 100 ರೂ. ಗಳಂತೆ ದಂಡ ವಿಧಿಸಲು ಬಿಬಿಎಂಪಿ ನಿರ್ಧರಿಸಿದೆ. ಅಂದಾಜಿನಂತೆ ಬೆಂಗಳೂರಿನಲ್ಲಿ 60 ಸಾವಿರಕ್ಕೂ ಅಧಿಕ ಅಂಗಡಿ-ಮುಂಗಟ್ಟುಗಳಿವೆ. ಈ ಪೈಕಿ ಅರ್ಧಕ್ಕೂ ಅಧಿಕ ಅಂಗಡಿಗಳಲ್ಲಿ ತಂಬಾಕು ಪದಾರ್ಥಗಳನ್ನು ಯಾವುದೇ ಎಗ್ಗಿಲ್ಲದೆ ಮಾರಾಟ ಮಾಡಲಾಗುತ್ತಿದೆ.

j3tvkannada
ತಂಬಾಕು ಪದಾರ್ಥಗಳನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ, ಶಾಲಾ ಮಕ್ಕಳಿಗೆ ಮಾರಾಟ ಮಾಡುವಂತಿಲ್ಲ. ಸಿಗರೇಟು ಮಾರುವುದಾದರೆ ಇಡೀ ಪ್ಯಾಕೆಟ್ ಮಾರಾಟ ಮಾಡಬೇಕು. ಬಿಡಿ ಸಿಗರೇಟ್ ಮಾರಾಟ ಮಾಡಬಾರದೆಂಬ ನಿಯಮಗಳಿದ್ದರೂ, ಯಾವುದೇ ವ್ಯಾಪಾರಿಗಳು ಪಾಲಿಸುತ್ತಿಲ್ಲ. ಜತೆಗೆ ತಂಬಾಕು ಮಾರಾಟ ಮಾಡುವ ಮಳಿಗೆಗಳ ಮುಂದೆ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂಬ ಬೋರ್ಡ್ ಅನ್ನು ಎಲ್ಲರಿಗೂ ಸ್ಪಷ್ಟವಾಗಿ ಕಾಣುವಂತೆ ಅಳವಡಿಸಬೇಕು. ಆ ರೀತಿಯ ಫಲಕಗಳನ್ನು ಮೂಲೆಯೊಂದರಲ್ಲಿ ತೂಗು ಹಾಕಲಾಗಿರುತ್ತದೆ.
ಹೊಸ ಟ್ರೇಡ್ ಲೈಸೆನ್ಸ್ ಪದ್ಧತಿ ಜಾರಿಗೆ ಬಂದ ನಂತರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಇಲ್ಲವಾದರೆ ವ್ಯಾಪಾರ ಲೈಸೆನ್ಸ್ಗೆ ಕುತ್ತು ಬರಲಿದೆ. ಜತೆಗೆ ಇದರಿಂದ ತಂಬಾಕು ಮಾರಾಟ ಪ್ರಮಾಣ ತಗ್ಗಲಿದೆ ಮತ್ತು ತಂಬಾಕು ಮಾರಾಟ ಮಾಡುವ ಮಳಿಗೆಗಳ ಸಂಖ್ಯೆ ಇಳಿಕೆಯಾಗಲಿದೆ ಎಂದು ಹೇಳಲಾಗಿದೆ. ನಗರದಲ್ಲಿಈ ತಂಬಾಕು ಪದಾರ್ಥಗಳ ಮಾರಾಟಕ್ಕೆ ಟ್ರೇಡ್ ಲೈಸೆನ್ಸ್ ನೀಡುವ ಪದ್ಧತಿ ಐದು ವರ್ಷಗಳ ಹಿಂದೆಯೇ ಜಾರಿಗೆ ಬರಬೇಕಿತ್ತು. ಆದರೆ ನಾನಾ ಕಾರಣಗಳಿಂದಾಗಿ ಜಾರಿಗೆ ಬಂದಿಲ್ಲ.
2020 ರಲ್ಲಿಯೇ ಕರ್ನಾಟಕ ಸರಕಾರ, ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ಸ್ (ಸಿಗರೇಟು ಮತ್ತು ಇತರೆ ತಂಬಾಕು ಪದಾರ್ಥಗಳ ಮಾರಾಟ ಮಾಡುವ ಸ್ಥಳಗಳ ನಿಯಂತ್ರಣ ಮತ್ತು ತಪಾಸಣೆ) ನಿಯಮಗಳ ಅಧಿಸೂಚನೆ ಹೊರಡಿಸಿತ್ತು. ಅದನ್ನು ಕಡ್ಡಾಯವಾಗಿ ಪಾಲಿಸುವಂತೆ ಪೌರಾಡಳಿತ ನಿರ್ದೇಶನಾಲಯ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಿತ್ತು. ಅದರಂತೆ ರಾಜ್ಯದ ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿಈ ಟೊಬ್ಯಾಕೋ ಟ್ರೇಡ್ ಲೈಸೆನ್ಸ್ ಪದ್ಧತಿ ಜಾರಿಯಲ್ಲಿದೆ. ಬಿ.ಬಿ.ಎಂ.ಪಿಯಲ್ಲಿಇದೀಗ ವೆಬ್ಸೈಟ್ ಅಪ್ಡೇಟ್ ವೇಳೆ ಅದನ್ನು ಅಡಕಗೊಳಿಸಲಾಗುತ್ತಿದೆ.