
ಬಳ್ಳಾರಿ: ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಬಳ್ಳಾರಿ ಜಿಲ್ಲೆ ಈ ಬಾರಿಯಾದರೂ ಉನ್ನತ ಸಾಧನೆ ಮಾಡುವುದೇ ಎಂಬ ನಿರೀಕ್ಷೆ ಮತ್ತೊಮ್ಮೆ ಹುಸಿಯಾಗಿದೆ. ಜಿಲ್ಲೆಗಳ ರ್ಯಾಂಕ್ ಪಟ್ಟಿಯಲ್ಲಿ ಕಳೆದ ಬಾರಿಗಿಂತಲೂ ಒಂದು ಸ್ಥಾನ ಕೆಳಗೆ ಜಾರುವ ಮೂಲಕ ಆಘಾತವುಂಟು ಮಾಡಿದೆ. 2023-24ನೇ ಸಾಲಿನಲ್ಲಿ ಶೇ 64.99 ಫಲಿತಾಂಶದೊಂದಿಗೆ 28ನೇ ಸ್ಥಾನದಲ್ಲಿದ್ದ ಬಳ್ಳಾರಿ ಜಿಲ್ಲೆ ಈ ಬಾರಿ ಶೇ 59.86ರ ಫಲಿತಾಂಶದೊಂದಿಗೆ 29ನೇ ಸ್ಥಾನಕ್ಕೆ ಬಂದು ನಿಂತಿದೆ. ಪರೀಕ್ಷೆಗೆ ಹಾಜರಾದ ಒಟ್ಟು 20,262 ವಿದ್ಯಾರ್ಥಿಗಳಲ್ಲಿ 12,128 ಮಂದಿ ಉತ್ತೀರ್ಣರಾಗಿದ್ದಾರೆ. 7,998 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲೂ ಹೆಣ್ಣುಮಕ್ಕಳೇ ಹೆಚ್ಚಿನ ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದಾರೆ. 9,852 ಗಂಡು ಮಕ್ಕಳ ಪೈಕಿ 5,102 ಹಾಗೂ 10,410 ಹೆಣ್ಣುಮಕ್ಕಳ ಪೈಕಿ 7,026 ಮಂದಿ ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಗಳಿಗೆ ಶೇ 56.09ರಷ್ಟು ಫಲಿತಾಂಶ ಸಿಕ್ಕಿದೆ. ವಿಷಯವಾರು ಫಲಿತಾಂಶ ಗಮನಿಸಿದರೆ ವಿಜ್ಞಾನಕ್ಕೆ ಅತ್ಯಂತ ಕಡಿಮೆ (ಶೇ 66) ಫಲಿತಾಂಶ ಸಿಕ್ಕಿದೆ. ತೃತೀಯ ಭಾಷೆಗೆ ಶೇ 83ರಷ್ಟು ಫಲಿತಾಂಶ ಬಂದಿದೆ. ಪ್ರಥಮ ಭಾಷೆಗೆ ಶೇ 76, ಸಮಾಜ ವಿಜ್ಞಾನಕ್ಕೆ ಶೇ 75, ದ್ವಿತೀಯ ಭಾಷೆಗೆ ಶೇ 74, ಗಣಿತಕ್ಕೆ ಶೇ 69 ಫಲಿತಾಂಶ ಸಿಕ್ಕಿದೆ.