
ಕೊಡಗು: ಜಿಲ್ಲೆಯಲ್ಲಿ ಪ್ರಾರಂಭಿಸಿರುವ ಕೊಡಗು ವಿಶ್ವವಿದ್ಯಾಲಯವನ್ನು ರದ್ದುಪಡಿಸುವುದು ಅಥವಾ ವಿಲೀನಗೊಳಿಸುವುದಕ್ಕೆ ಮುಂದಾದರೆ ಸರ್ಕಾರವು ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ರಾಜ್ಯ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಎನ್.ದೀಪಕ್ ಎಚ್ಚರಿಸಿದರು.

j3tvkannada
ಕರ್ನಾಟಕ ರಕ್ಷಣಾ ವೇದಿಕೆಯ ಕೊಡಗು ಜಿಲ್ಲಾ ಘಟಕದಿಂದ ಜೇಸಿ ವೇದಿಕೆಯಲ್ಲಿ ಸೋಮವಾರ ಅಯೋಜಿಸಿದ್ದ ಕೊಡಗು ವಿಶ್ವವಿದ್ಯಾಲಯವನ್ನು ಉಳಿಸಿಬೇಕೆಂಬ ಹಕ್ಕೊತ್ತಾಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ವಿಶ್ವವಿದ್ಯಾಲಯವನ್ನು ವಿಲೀನ ಮಾಡುವುದಿಲ್ಲ ಎಂದು ಇದುವರೆಗೆ ಸರ್ಕಾರ ಅಧಿಕೃತ ಹೇಳಿಕೆ ನೀಡಿಲ್ಲ. ಇದರಿಂದ ವಿದ್ಯಾರ್ಥಿಗಳು ಗೊಂದಲದಲ್ಲಿದ್ದು, ವಿಶ್ವವಿದ್ಯಾಲಯಕ್ಕೆ ಸೇರಲು ಭಯಪಡುತ್ತಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಜಿಲ್ಲೆಯ ಶಾಸಕರುಗಳು ಕೂಡ ಇದರ ಕುರಿತು ಸ್ಪಷ್ಟ ನಿಲುವು ವ್ಯಕ್ತಪಡಿಸುತ್ತಿಲ್ಲ ಎಂದು ದೂರಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅರುಣ್ ಕೊತ್ನಳ್ಳಿ ಮಾತನಾಡಿ, ಜಿಲ್ಲೆಯ ಇಬ್ಬರು ಶಾಸಕರು ವಿಶ್ವವಿದ್ಯಾಲಯವನ್ನು ಉಳಿಸಲು ಹೆಚ್ಚಿನ ಪ್ರಯತ್ನ ಮಾಡಬೇಕು. ರೈತರು, ಬಡವರು, ಕೂಲಿ ಕಾರ್ಮಿಕರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ-ಪಂಗಡದವರು ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿದ್ದಾರೆ. ಕೊಡಗಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ಆರ್ಥಿಕ ಮುಗ್ಗಟ್ಟಿನಿಂದ ನಗರ ಪ್ರದೇಶಗಳಿಗೆ ಹೋಗಿ ಸ್ನಾತಕೋತ್ತರ ಪದವಿ ಪಡೆಯಲು ಸಾಧ್ಯವಾಗುತ್ತಿಲ್ಲ. ನಮ್ಮ ಜಿಲ್ಲೆಯಲ್ಲಿನ ವಿಶ್ವವಿದ್ಯಾಲಯ ಮುಂದುವರಿದರೆ, ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಅವಕಾಶವಾಗುವುದು ಎಂದರು.

j3tvkannada
ಸಭೆಗೂ ಮುನ್ನ ಪ್ರತಿಭಟನಾಕಾರರು ಪುಟ್ಟಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ನಂತರ ಮೆರವಣಿಗೆಯಲ್ಲಿ ಸಾಗಿದರು. ತಹಶೀಲ್ದಾರ್ ಕೃಷ್ಣಮೂರ್ತಿ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನಾ ಸಭೆಯಲ್ಲಿ ಕಾರ್ಯದರ್ಶಿ ಮಂಜುನಾಥ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸಂಧ್ಯಾ ಗಣೇಶ್, ನಗರಾಧ್ಯಕ್ಷ ಮಂಜುನಾಥ್, ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕು ಅಧ್ಯಕ್ಷರು, ತಾಲ್ಲೂಕು ಮತ್ತು ಹೋಬಳಿ ಘಟಕದ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.