
ಬೆಂಗಳೂರು ಗ್ರಾಮಾಂತರ: ಸರಕಾರ ಅಧಿಕಾರ ಬಂದು 2 ವರ್ಷ ಪೂರೈಸುತ್ತಿರುವ ಹಿನ್ನೆಲೆ ಸರಕಾರದ ಸಾಧನೆ ಸಮಾರಂಭವನ್ನು ಏ.28ರಂದು ಬೆಂಗಳೂರು ಗ್ರಾಮಾಂತರದ ಜಿಲ್ಲಾ ಕೇಂದ್ರವಾದ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಲಾಗಿದೆ. ಅಂದು ಸಿಎಂ ಸಿದ್ದರಾಮಯ್ಯ ಅವರು ನಾನಾ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಜಿಲ್ಲಾಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

j3tvkannada
ಜಿಲ್ಲಾಡಳಿತ ಭವನದ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಿವೇಶನ ರಹಿತ ಅರ್ಹರನ್ನು ಗುರುತಿಸಲಾಗಿದೆ. ಫಲಾನುಭವಿಗಳಿಗೆ ಮುಖ್ಯಮಂತ್ರಿಗಳಿಂದ ಹಕ್ಕುಪತ್ರ ವಿತರಿಸಲಾಗುವುದು. ಇದಕ್ಕಾಗಿ ಸಂಬಂಧಿಸಿದ ತಾಲೂಕು ತಹಶೀಲ್ದಾರ್ಗಳು, ಇಒಗಳು ಶೀಘ್ರವಾಗಿ ಫಲಾನುಭವಿಗಳ ಅಂತಿಮ ಪಟ್ಟಿ ಸಿದ್ಧಪಡಿಸಿಬೇಕು ಎಂದು ಸೂಚಿಸಿದರು.
ಪೋಡಿ ದುರಸ್ತಿ ಜಮೀನುಗಳಿಗೆ ಹಕ್ಕು ಪತ್ರ ವಿತರಿಸಲಾಗುವುದು. ವಸತಿ ರಹಿತರಿಗೆ ವಸತಿ ಸೌಲಭ್ಯ ವಿತರಣೆ ಮಾಡಲಾಗುವುದು. ಸೆಪ್ಟೆಂಬರ್ನಲ್ಲಿ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ10,000ಕ್ಕೂ ಅಧಿಕ ಅಭ್ಯರ್ಥಿಗಳು ಭಾಗವಹಿಸಿದ್ದರು. ಅವರಲ್ಲಿ2,000ಕ್ಕೂ ಅಧಿಕ ಅಭ್ಯರ್ಥಿಗಳು ಕಂಪನಿಗಳಲ್ಲಿಉದ್ಯೋಗ ಪಡೆದಿದ್ದಾರೆ. ಇವರಲ್ಲಿ ಕೆಲವು ಅಭ್ಯರ್ಥಿಗಳಿಗೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಉದ್ಯೋಗ ನೇಮಕಾತಿ ಪತ್ರ ವಿತರಿಸಲಿದ್ದಾರೆ ಎಂದರು.
ಕಾಮಗಾರಿಗೆ ಪಟ್ಟಿಗೆ ಸೂಚನೆ
ಜಿಲ್ಲೆಯಲ್ಲಿ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗೆ ಸಿದ್ಧವಿರುವ ಕಾಮಗಾರಿಗಳ ಪಟ್ಟಿಯನ್ನು ತಯಾರಿಸುವ ಜತೆ ನಾನಾ ಇಲಾಖೆಗಳು ಎರಡು ವರ್ಷಗಳಲ್ಲಿ ಮಾಡಿರುವಂತಹ ಆಯವ್ಯಯ, ಅಭಿವೃದ್ಧಿ ಕೆಲಸಗಳು, ಸೌಲಭ್ಯ ಪಡೆದ ಫಲಾನುಭವಿಗಳ ಮಾಹಿತಿಯ ಜತೆ ನಾನಾ ಸೌಲಭ್ಯಗಳನ್ನು ಪಡೆಯುವ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ವರದಿ ನೀಡಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಅರ್ಹರಿಗೆ ಉದ್ಯೋಗ ಕಲ್ಪಿಸಿ
ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸಾಕಷ್ಟು ರೈತರು ಭೂಮಿ ಕಳೆದುಕೊಂಡಿದ್ದಾರೆ. ಅಂತಹ ಕುಟುಂಬಗಳಿಗೆ ಒಂದು ಉದ್ಯೋಗ ಸಿಗಬೇಕು ಎನ್ನುವುದು ನನ್ನ ಗುರಿಯಾಗಿದ್ದು, ಕುಟುಂಬಕ್ಕೆ ಒಂದು ಉದ್ಯೋಗ ಕಲ್ಪಿಸಿ ಎಂಬುದಾಗಿ ಸಭೆಯಲ್ಲಿ ಕಂಪನಿಯ ಮುಖ್ಯಸ್ಥರಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಿ ಕಂಪನಿಗಳಿಗೆ ಅವಶ್ಯಕತೆ ಇರುವಂತಹ ಕೌಶಲ ತರಬೇತಿಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಸಿಗಲು ಅವಕಾಶ ಮಾಡಿಕೊಡಬೇಕು, ಈ ನಿಟ್ಟಿನಲ್ಲಿ ಕೌಶಲಾಭಿವೃದ್ಧಿ ಅಧಿಕಾರಿಗಳು ಆದ್ಯತೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರಾಜಣ್ಣ, ಬಯಪ ಅಧ್ಯಕ್ಷ ಶಾಂತಕುಮಾರ್, ದೊಡ್ಡಬಳ್ಳಾಪುರ ಮಾಜಿ ಶಾಸಕ ವೆಂಕಟರಮಣಯ್ಯ, ಜಿಲ್ಲಾಧಿಕಾರಿ ಎ.ಬಿ. ಬಸವರಾಜು, ಸಿಇಒ ಡಾ.ಕೆ.ಎನ್ ಅನುರಾಧ, ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಶಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್, ಜಿಲ್ಲಾಮಟ್ಟ, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.