

j3tvkannada
ದಕ್ಷಿಣ ಕನ್ನಡ : ಕರಾವಳಿ ಭಾಗದಲ್ಲಿ ಕಳೆದ ಎರಡು ತಿಂಗಳಿಂದ ವಿಪರೀತ ಬಿಸಿಲಿನ ಧಗೆ ಕಾಡುತ್ತಿದೆ. ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಜನ ಕೊಡೆ, ನೆರಳಿನ ಆಶ್ರಯವನ್ನು ಪಡೆಯುತ್ತಿದ್ದಾರೆ. ಬಿಸಿಲಿನಿಂದ ಕಂಗೆಟ್ಟ ಜನರು ಸ್ವಲ್ಪ ಸಮಯವಾದರೂ ಕೂಲ್ ಆಗಿರಲೆಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ವಿಟ್ಲಪೇಟೆಯ ಅಂಗಡಿ ಮಾಲೀಕರೊಬ್ಬರು ಕೃತಕ ಫಾಗ್ (Fogg) ವ್ಯವಸ್ಥೆಯನ್ನು ಮಾಡಿದ್ದಾರೆ. ಹೌದು ಇಂತಹುದೊಂದು ಪ್ರಯತ್ನಕ್ಕೆ ಮುನ್ನುಡಿ ಬರೆದವರು ವಿಟ್ಲದ ಪೆಟ್ ಶಾಪ್ ಮಾಲಕ ಇಸ್ಮಾಯಿಲ್. ಬಿಸಿಲಿನ ತಾಪಮಾನದಿಂದ ತನ್ನನ್ನು ರಕ್ಷಿಸಿಕೊಳ್ಳಲು ತನ್ನ ಅಂಗಡಿ ಸುತ್ತಾ ಸಣ್ಣ ಮೋಟಾರ್ ಅಳವಡಿಸಿದ ಫ್ಯಾನ್ ಮೂಲಕ ನೀರನ್ನು ಸಿಂಪಡಿಸಲು ಆರಂಭಿಸಿದ್ದರು. ಈ ಸಿಂಪಡಣೆಯಿಂದ ಅವರ ಅಂಗಡಿಯ ಆಸುಪಾಸಿನಲ್ಲಿ ಮಂಜಿನ ರೀತಿಯಲ್ಲಿ ನೀರಿನ ಸಿಂಪಡಣೆಯ ಅನುಭವ ರಸ್ತೆಯಲ್ಲಿ ಹೋಗುವ ಸಾರ್ವಜನಿಕರಿಗೆ ಆಗಿತ್ತು. ಇಸ್ಮಾಯಿಲ್ ಅಂಗಡಿ ಸುತ್ತ ಸುಡು ಬಿಸಿಲಿನ ವಾತಾವರಣದಲ್ಲೂ ತಂಪಾದ ಅನುಭವ ಪಡೆದ ಜನ ಬಿಸಿಲಿನ ಧಗೆಯಿಂದ ಪಾರಾಗಲು ಈ ಅಂಗಡಿಯ ಬಳಿ ನಿಲ್ಲಲು ಪ್ರಾಂಭಿಸಿದ್ದರು. ಕಳೆದ ವರ್ಷದಿಂದ ಈ ಫಾಗ್ ವ್ಯವಸ್ಥೆಯನ್ನು ಆರಂಭಿಸಿದ್ದ ಇಸ್ಮಾಯಿಲ್ ಸೇವೆಗೆ ಜನರಿಂದ ಸ್ಪಂದನೆ ದೊರೆತ ಹಿನ್ನಲೆಯಲ್ಲಿ ಇದೀಗ ವಿಟ್ಲ ಜಂಕ್ಷನ್ ವರೆಗೂ ನೀರು ಸಿಂಪಡಣೆಯಾಗುವಂತಹ ವ್ಯವಸ್ಥೆಯನ್ನು ಮಾಡಿದ್ದಾರೆ.

ಇದರಿಂದಾಗಿ ಟ್ರಾಫಿಕ್ ನಲ್ಲಿ ಸಿಲುಕುವ ಜನ ಉರಿ ಬಿಸಿಲಿನಲ್ಲಿ ನಿಲ್ಲೋದು ತಪ್ಪಿದಂತಾಗಿ, ತಂಪಾದ ನೀರಿನ ಸಿಂಪಡಣೆಯಿಂದ ಖುಷಿ ಪಡುತ್ತಿದ್ದಾರೆ. ಇಸ್ಮಾಯಿಲ್ ಇಂತಹ ವ್ಯವಸ್ಥೆಯ ಸೌದಿ ಅರೇಬಿಯಾದ ಮಕ್ಕಾದಲ್ಲಿ ಮಾಡಿರುವುದನ್ನು ಕಂಡಿದ್ದರು. ತಾನೂ ಯಾಕೆ ಈ ರೀತಿ ಮಾಡಬಾರದು ಎನ್ನುವ ಕಾರಣಕ್ಕೆ ತನ್ನ ಅಂಗಡಿಯ ಸುತ್ತ ಈ ನೀರು ಸಿಂಪಡಣೆಯ ವ್ಯವಸ್ಥೆಗೆ ಮುಂದಾಗಿದ್ದರು. ಪ್ರತೀ ದಿನ ಸುಮಾರು 20 ಲೀಟರ್ ನಷ್ಟು ನೀರು ಬೇಕಾಗುತ್ತಿದ್ದು, ಅತೀ ಬಿಸಲು ಇರುವ ಸಮಯದಲ್ಲಿ ಮಧ್ಯಾಹ್ನದಿಂದ ಸಂಜೆ 5 ಗಂಟೆ ತನಕ ನೀರು ಸಿಂಪಡಣೆ ಮಾಡುತ್ತಾರೆ.ಇನ್ನುಳಿದ ದಿನಗಳಲ್ಲಿ ದಿನಕ್ಕೆ ಎರಡರಿಂದ ಮೂರು ಗಂಟೆಗಳ ಕಾಲ ಈ ನೀರು ಸಿಂಪಡಿಸುತ್ತಿದ್ದಾರೆ. ನೀರನ್ನು ಇಸ್ಮಾಯಿಲ್ ಇರುವ ಕಟ್ಟಡವು ಪೂರೈಸುತ್ತಿದ್ದು, ಒಂದು ಸ್ವಿಚ್ ಮೂಲಕ 6 ನೀರು ಸಿಂಪಡಣೆಯ ಮೋಟರ್ ರನ್ ಆಗುತ್ತೆ. ನೀರು ಹೆಚ್ಚಿನ ಒತ್ತಡದಲ್ಲಿ ಬರಬೇಕಾದ ಕಾರಣ ಫ್ರೆಷರ್ ಪಂಪ್ ಕೂಡಾ ಅಳವಡಿಸಲಾಗಿದೆ. ಇಸ್ಮಾಯಿಲ್ ರ ಈ ಸೇವೆಗೆ ಈ ಪರಿಸರದಲ್ಲಿ ಉತ್ತಮ ಸ್ಪಂದನೆಯೂ ದೊರೆಯುತ್ತಿದೆ.