
ಚಿತ್ರದುರ್ಗ: ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಅಂಗವಿಕಲರ ಜನಗಣತಿ ನಡೆಸಲು ನಿರ್ಧರಿಸಲಾಗಿದ್ದು, ಪ್ರಸಕ್ತ ವರ್ಷದಿಂದಲೇ ಈ ಕಾರ್ಯಕ್ರಮವನ್ನು ಕೈಗೊಳ್ಳಲಾಗುವುದು ಎಂದು ಅಂಗವಿಕಲರ ಹಕ್ಕು ಅಧಿನಿಯಮ ಅನುಷ್ಠಾನದ ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ ಹೇಳಿದ್ದಾರೆ. ಜಿಲ್ಲೆಯ ವಿ.ಆರ್.ಡಬ್ಲ್ಯೂ, ಎಂ.ಆರ್.ಡಬ್ಲ್ಯೂಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಬಗ್ಗೆ ಒಂಬತ್ತು ತಿಂಗಳ ಹಿಂದೆಯೇ ಸಿಎಂ ಸಿದ್ದರಾಮಯ್ಯ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿತ್ತು ಎಂದು ತಿಳಿಸಿದ್ದಾರೆ.

j3tvkannada
ಈ ಅಂಗವಿಕಲರ ಜನಗಣತಿಯ ದತ್ತಾಂಶವು ಅಂಗವಿಕಲರ ಸಬಲೀಕರಣಕ್ಕಾಗಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸಹಕಾರಿಯಾಗಲಿದೆ. ಸಿಎಂ ಸಿದ್ದರಾಮಯ್ಯ ಕೂಡ ಈ ವರ್ಷದ ಬಜೆಟ್ನಲ್ಲಿ ಅಂಗವಿಕಲರ ಸಮೀಕ್ಷೆ ನಡೆಸುವ ಬಗ್ಗೆ ಘೋಷಿಸಿದ್ದಾರೆ. ಈ ಜನಗಣತಿ ಕಾರ್ಯಕ್ಕೆ ವಿ.ಆರ್.ಡಬ್ಲ್ಯೂ, ಎಂ.ಆರ್.ಡಬ್ಲ್ಯೂಗಳಿಗೆ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಇನ್ನು ಈಗಾಗಲೇ ಎಷ್ಟು ಜನ ಅಂಗವಿಕಲರು ಯು.ಡಿ.ಐ.ಡಿ ಕಾರ್ಡ್ ಪಡೆದುಕೊಂಡಿದ್ದಾರೆ, ಬಾಕಿ ಎಷ್ಟು ಕಾರ್ಡ್ ಇದೆ, ಎಷ್ಟು ಜನರಿಗೆ ಅಂಗವಿಕಲರ ಮಾಸಾಶನ ತಲುಪುತ್ತಿದೆ ಎಂಬ ಎಲ್ಲಾ ಮಾಹಿತಿ ಸೇರಿದಂತೆ ಇತರೆ ಮಾಹಿತಿಯನ್ನು ಮನೆ ಮನೆಗೆ ಭೇಟಿ ನೀಡಿ ಸಂಗ್ರಹಿಸಲಾಗುವುದು ಎಂದಿದ್ದಾರೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕನಿಷ್ಟ ಎರಡು ಅಂಗವಿಕಲರ ಸ್ವ-ಸಹಾಯ ಗುಂಪುಗಳನ್ನು ಶೀಘ್ರವೇ ರಚನೆ ಮಾಡಲಾಗುವುದು. ಆ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಬೇಕಿದೆ. ಮುಂದಿನ ದಿನಗಳಲ್ಲಿ ಸುಗಮ್ಯ ಯಾತ್ರೆಯನ್ನು ಕೈಗೊಳ್ಳಲಾಗುವುದು, ಜೊತೆಗೆ ಅಂಗವಿಕಲರ ಸಬಲೀಕರಣಕ್ಕಾಗಿ ಉತ್ತಮ ಸಮೀಕ್ಷೆ ನಡೆಸಬೇಕು ಎಂದು ದಾಸ್ ಸೂರ್ಯವಂಶಿ ಹೇಳಿದ್ದಾರೆ.
ಒಳಮೀಸಲಾತಿ ಜಾರಿಗಾಗಿ ಸರ್ಕಾರದ ಮೊದಲ ಹೆಜ್ಜೆ:–
ಇತ್ತೀಚೆಗೆ ಒಳಮೀಸಲಾತಿ ಬಗ್ಗೆ ನಿಖರವಾದ ವರದಿ ಕೊಡಲು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಗಣತಿಯನ್ನು ಕರ್ನಾಟಕ ಸರ್ಕಾರ ಆರಂಭಿಸಿತ್ತು. ಒಳಮೀಸಲಾತಿಯ ಮೊದಲ ಹೆಜ್ಜೆ ಎನ್ನುವಂತೆ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆ ಆರಂಭವಾಗಿದೆ. ಆ ಮೂಲಕ ಸಾಮಾಜಿಕ ತಾರತಮ್ಯಕ್ಕೆ ಗುರಿಯಾಗಿರುವ ಕೆಲವು ಸಮುದಾಯಗಳಿಗೆ ಬಲ ನೀಡಲು ಮುಂದಾಗಿದೆ.