
ಬೆಂಗಳೂರು: ಖ್ಯಾತ ಕ್ರೀಡಾಪಟು ಮಾಜಿ ಕ್ರಿಕೆಟಿಗ ಕನ್ನಡಿಗ ಅನಿಲ್ ಕುಂಬ್ಳೆ ಇನ್ನು ಮುಂದೆ ಅರಣ್ಯ ಇಲಾಖೆಯ ರಾಯಭಾರಿಯಾಗಲಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

j3tvkannada
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅನಿಲ್ ಕುಂಬ್ಳೆ ರಾಯಭಾರಿ ಆಗಿರೋ ವಿಚಾರವನ್ನು ಸ್ಪಷ್ಟಪಡಿಸಿದರು. ಅನಿಲ್ ಕುಂಬ್ಳೆ ಅವರು ಅರಣ್ಯ ಇಲಾಖೆ ರಾಯಭಾರಿಯಾಗಲು ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.
ಈ ಹಿಂದೆ ಕರ್ನಾಟಕ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಅನಿಲ್ ಕುಂಬ್ಳೆ ಅವರಿಗೆ ಇದೆ. ಇವರು ವಿಶ್ವಾದ್ಯಂತ ಖ್ಯಾತಿ ಹೊಂದಿದ್ದಾರೆ. ಅನಿಲ್ ಕುಂಬ್ಳೆ ಅವರು ಅರಣ್ಯ ಇಲಾಖೆಗೆ ರಾಯಭಾರಿ ಆಗಲಿದ್ದು, ಅರಣ್ಯ ಸಂರಕ್ಷಣೆ, ಅರಣ್ಯ ಸಂವರ್ಧನೆ, ವೃಕ್ಷ ಸಂರಕ್ಷಣೆ, ವನ್ಯಜೀವಿ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದರು.
ಅನಿಲ್ ಕುಂಬ್ಳೆ ಅವರಿಗೆ ವನ್ಯಜೀವಿಗಳ ಬಗ್ಗೆ ಅಪಾರ ಕಾಳಜಿ ಇದೆ. ಅರಣ್ಯದ ಬಗ್ಗೆ ಪ್ರೀತಿ ಇದೆ. ಹೀಗಾಗಿ ಅವರು ಯಾವುದೇ ಸಂಭಾವನೆ ಪಡೆಯದೆ ರಾಯಭಾರಿ ಆಗಲು ಸಮ್ಮತಿಸಿದ್ದಾರೆ. ಆದಷ್ಟು ಬೇಗ ಸಿ.ಎಂ ಮತ್ತು ಡಿ.ಸಿ.ಎಂ ಸಮ್ಮುಖದಲ್ಲಿ ಎಂ.ಒ.ಯು ಮಾಡಿಕೊಳ್ಳಲಾಗುವುದು ಅಂತ ತಿಳಿಸಿದರು.